ನವದೆಹಲಿ : "ಭಾರತದ ಜನಸಂಖ್ಯೆಯನ್ನು ನಿಯಂತ್ರಿಸಬೇಕಿದೆ, ಇಷ್ಟೊಂದು ದೊಡ್ಡ ಜನಸಂಖ್ಯೆಗಾಗಿ ಅಭಿವೃದ್ಧಿ, ಶುದ್ಧ ಗಾಳಿ ಒದಗಿಸುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಗಟ್ಟುವುದು ಸುಲಭದ ಕೆಲಸವಲ್ಲ,'' ಎಂದು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.
ಪಿಎಚ್‍ಡಿ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಅಂತರಾಷ್ಟ್ರೀಯ ಹವಾಮಾನ ಶೃಂಗಸಭೆ 2021ರಲ್ಲಿ ಅವರು ಮಾತನಾಡುತ್ತಿದ್ದರು.
"ಭಾರತದ ಜನಸಂಖ್ಯೆ ಹೆಚ್ಚಾಗಿದೆ ಹಾಗೂ ಅದನ್ನು ನಿಯಂತ್ರಿಸಬೇಕಿದೆ. ಇಷ್ಟೊಂದು ದೊಡ್ಡ ಜನಸಂಖ್ಯೆಯನ್ನು ನಿಭಾಯಿಸುವುದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಕಷ್ಟವಾಗುತ್ತದೆ" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಭಾಷಣ ಮಾಡಲಿದ್ದಾರೆಂದು ತಿಳಿಸಲಾಗಿತ್ತಾದರೂ ಅವರು ಆಗಮಿಸರಲಿಲ್ಲ. ಬದಲು ಅವರು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಕುರಿತು ಮಾತನಾಡಿದ್ದ ಸ್ವಾತಂತ್ರ್ಯ ದಿನದ ಭಾಷಣವನ್ನು ಪ್ರಸಾರ ಮಾಡಲಾಯಿತು.


