ಕಾಸರಗೋಡು: ನಗರದ ವಿವಿಧೆಡೆ ಮುಖ್ಯ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆಗೊಳಿಸುವವರಿಗೆ ಟ್ರಾಫಿಕ್ ಪೊಲೀಸ್ ಚುರುಕುಮುಟ್ಟಿಸಲು ಮುಂದಾಗಿದೆ. ಕಾನೂನು ಉಲ್ಲಂಘಿಸಿ ರಸ್ತೆಗಳಲ್ಲಿ ನಿಲುಗಡೆಗೊಳಿಸುವ ವಾಹನಗಳ ಚಕ್ರಕ್ಕೆ ಲಾಕ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜತೆಗೆ ಈ ವಾಹನಗಳಿಗೆ ಸ್ಟಿಕ್ಕರ್ ಅಳವಡಿಸಿ ದಂಡದ ಮಾಹಿತಿಯನ್ನೂ ನೀಡಲಾಗುತ್ತಿದೆ.
ಕಾಸರಗೋಡು ನಗರದ ಪ್ರಮುಖ ರಸ್ತೆಗಳಲ್ಲಿ ಖಾಸಗಿ ವಾಹನಗಳನ್ನು ಅನಧಿಕೃತವಾಗಿ ನಿಲುಗಡೆಗೊಳಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ತೊಡಕುಂಟುಮಾಡುವುದನ್ನು ತಡೆಗಟ್ಟಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಗರದ ನಾನಾ ಕಡೆ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿದ್ದರೂ, ಇದನ್ನು ಉಲ್ಲಂಘಿಸಿ ವಾಹನ ನಿಲುಗಡೆಗೊಳಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳದಿರುವ ಬಗ್ಗೆ ವ್ಯಾಪಕ ಅಸಮಧಾನ ವ್ಯಕ್ತವಾಗಿತ್ತು. ಲಾಕ್ ಅಳವಡಿಕೆ ಕಾರ್ಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ.





