ಕೊಚ್ಚಿ: ಆಟೋರಿಕ್ಷಾಗಳ ಅಕ್ರಮ ಪಾರ್ಕಿಂಗ್ ನ್ನು ಅನುಮತಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಸಾರ್ವಜನಿಕ ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ತಡೆಯಲು ನ್ಯಾಯಾಲಯ ಆದೇಶವನ್ನು ನೀಡಿತು.
‘ಆಟೋರಿಕ್ಷಾ ಮಾಲೀಕರಿಂದ ಅಕ್ರಮ ಪಾರ್ಕಿಂಗ್ ಕಳೆದ ಕೆಲವು ವರ್ಷಗಳಿಂದ ಗಮನಕ್ಕೆ ಬಂದಿದೆ. ಅವರು ಇಷ್ಟು ದಿನ ಕಾನೂನುಬಾಹಿರವಾಗಿ ಪಾರ್ಕಿಂಗ್ ಮಾಡುತ್ತಿದ್ದಾರೆ. ಪಾರ್ಕಿಂಗ್ ಮಾಡಲು ಬೇರೆ ಸ್ಥಳಾವಕಾಶವಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಅದನ್ನು ಇನ್ನು ಮುಂದೆ ಅನುಮತಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಟ್ಟಾಯಂನ ಎರುಮೇಲಿಯಲ್ಲಿರುವ ಅಂಗಡಿ ಮಾಲೀಕರ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯವು ಶನಿವಾರ ಈ ತೀರ್ಪನ್ನು ನೀಡಿದೆ. ತನ್ನ ಅಂಗಡಿಯ ಮುಂದೆ ಆಟೋರಿಕ್ಷಾಗಳನ್ನು ಅನಧಿಕೃತವಾಗಿ ನಿಲ್ಲಿಸುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಅಲ್ಲದೆ, ಅಂಗಡಿಗೆ ಬರುವ ಜನರಿಗೆ ಸ್ವಂತ ವಾಹನಗಳನ್ನು ನಿಲ್ಲಿಸಲು ಸ್ಥಳವಿರುವುದಿಲ್ಲ. ಇದರ ಬೆನ್ನಲ್ಲೇ ಅಂಗಡಿ ಮಾಲೀಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಆಟೋ ಮಾಲೀಕರು ಕಳೆದ 30 ವರ್ಷಗಳಿಂದ ಒಂದೇ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎರಡೂ ಕಡೆಯವರ ವಾದಗಳನ್ನು ಆಲಿಸಿದ ನಂತರ, ಆಟೋ ಮಾಲೀಕರಿಗೆ ಅಕ್ರಮ ಪಾರ್ಕಿಂಗ್ ನಿಲ್ಲಿಸಲು ಮತ್ತು ಅನುಮತಿ ಇರುವ ಸ್ಥಳಗಳಲ್ಲಿ ಮಾತ್ರ ನಿಲ್ಲಿಸುವಂತೆ ಕೋರ್ಟ್ ಸೂಚಿಸಿತು.
ಅಂಗಡಿಗಳ ಮುಂದೆ ಪಾರ್ಕಿಂಗ್ ಮಾಡಲು ಜಾಗವನ್ನು ನೀಡುವಂತೆ ನ್ಯಾಯಾಲಯ ಎರುಮೇಲಿ ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಿದೆ. ರಾಜ್ಯಾದ್ಯಂತ ಇಂತಹ ಕಾನೂನುಬಾಹಿರ ಪಾರ್ಕಿಂಗ್ ತಡೆಯಲು ವಿಶೇಷ ಕಾಳಜಿ ವಹಿಸುವಂತೆ ಪೋಲೀಸರಿಗೆ ಕೋರ್ಟ್ ಸೂಚಿಸಿದೆ.


