ಮಂಜೇಶ್ವರ : ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನಸಿನ ಯೋಜನೆಯಾದ ಮಕ್ಕಳ ಆಟದ ಉದ್ಯಾನದ ಶಂಕು ಸ್ಥಾಪನೆ ಕಾರ್ಯಕ್ರಮ ಸರಳವಾಗಿ ನಡೆಯಿತು.
ಕುಳೂರು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಅವರು ಈ ಹಿಂದೆ ಮಕ್ಕಳ ಆಟದ ಉದ್ಯಾನವನ್ನು ನಿರ್ಮಿಸಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಈ ಕುರಿತಾಗಿ ಶಾಲೆಗೆ ಪ್ರತೀ ಹಂತದಲ್ಲಿಯೂ ಸಹಕರಿಸುತ್ತಿರುವ ಶಾಲಾ ಹಳೆ ವಿದ್ಯಾರ್ಥಿಯಾದ, ಮುಂಬೈನ ಯುವ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್ ರವರಲ್ಲಿ ಯೋಜನೆಯ ಕುರಿತು ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಧನಾತ್ಮಕವಾಗಿ ಸ್ಪಂದಿಸುವುದರೊಂದಿಗೆ ಈ ಆಟದ ಉದ್ಯಾನದ ನಿರ್ಮಾಣದ ಪ್ರಾಯೋಜಕತ್ವವನ್ನು ವಹಿಸಿ, ಅದನ್ನು ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಘೋಷಿಸಿದ್ದು, ಶಾಲೆಯ ಕನಸಿನ ಯೋಜನೆಗೆ ರೆಕ್ಕೆ ಬಂದಂತಾಗಿತ್ತು. ಆದರೆ ಕೊರೋನ ಕಾರಣದಿಂದಾಗಿ ನಿರ್ಮಾಣ ಕಾರ್ಯ ತಡವಾದರೂ, ಇದೀಗ ಆಟದ ಉದ್ಯಾನಕ್ಕೆ ಶಂಕು ಸ್ಥಾಪನೆ ಮಾಡುವ ಮೂಲಕ ಮತ್ತೆ ಚಾಲನೆ ನೀಡಲಾಯಿತು.
ಆಟದ ಉದ್ಯಾನದ ಶಂಕು ಸ್ಥಾಪನೆಯನ್ನು ಪ್ರಾಯೋಜಕ ಮೋಹನ್ ಶೆಟ್ಟಿ ಮಜ್ಜಾರ್ ರವರು ನೆರವೇರಿಸಿದರು. ಇವರ ಧರ್ಮಪತ್ನಿ ಪೂಜಾ ಮೋಹನ್ ಹಾಗೂ ಮಕ್ಕಳು ಜೊತೆಗಿದ್ದರು. ಕಾರ್ಯಕ್ರಮದ ಅಧ್ಯಕ್ಷೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೆÇಯ್ಯೆಲ್, ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಕುಳೂರು, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಹರಿರಾಮ ಕುಳೂರು, ಶಾಲಾ ಮಾತೃ ಸಂಘದ ಉಪಾಧ್ಯಕ್ಷೆ ಸುಪ್ರೀತಾ ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ, ಪಿ. ಟಿ. ಎ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಸ್ವಾಗತಿಸಿ, ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಆದಷ್ಟು ಬೇಗನೆ ಆಟದ ಉದ್ಯಾನದ ನಿರ್ಮಾಣ ಕಾರ್ಯ ಮಾಡುವ ತೀರ್ಮಾನ ಮಾಡಲಾಯಿತು.




