ಮಂಜೇಶ್ವರ: ಆರ್‍ಎಸ್‍ಎಸ್ ಒಂದು ಫ್ಯಾಸಿಸ್ಟ್ ಸಂಘಟನೆ ಎಂಬ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ಕೇರಳ ವಿಧಾನಸಭೆಯಲ್ಲಿ ಈ ರೀತಿ ಮಾತನಾಡಿದರೆ 140 ಮಂದಿ ಸದಸ್ಯರ ಬೆಂಬಲವೂ ತಮಗೆ ದೊರೆಯಬಹುದೆಂದು ಅವರು ಭಾವಿಸಿದಂತಿದೆ. ಆದರೆ ಶಾಸಕಾಂಗದ ಮಹತ್ವದ ಬಗ್ಗೆಯೂ ಮಂಜೇಶ್ವರ ಎಂಎಲ್‍ಎಗೆ ಅರಿವಿಲ್ಲದಿರುವುದು ನಾಚಿಕೆಗೇಡು. ಶಾಸಕರು ಆರ್‍ಎಸ್‍ಎಸ್‍ನ ವಿರುದ್ಧ ಮಾತೆತ್ತುವ ಮೊದಲು ಮಂಡಲದ ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಮಾರ್ಮಿಕವಾಗಿ ಸಲಹೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಕಾಸರಗೋಡು ಹಾಗೂ ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳನ್ನು ಮುಸ್ಲಿಂಲೀಗ್ ಪ್ರತಿನಿಧಿಸುತ್ತಿದೆ. ಈ ಎರಡು ಮಂಡಲಗಳ ಅನೇಕ ಮಂದಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಕರ್ನಾಟಕವನ್ನೇ ಅವಲಂಬಿಸುತ್ತಿರುವರು. ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಜಿಲ್ಲೆಯು ಈಗಲೂ ಅತ್ಯಂತ ಹಿಂದುಳಿದಿದೆ. ಮಂಜೇಶ್ವರ ಮಂಡಲದಲ್ಲಿ ಒಂದು ಸಾಂಕೇತಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲೂ ಕೂಡ ಸಾಧ್ಯವಾಗಿಲ್ಲ. ಕಾಸರಗೋಡು ಮತ್ತು ಮಂಜೇಶ್ವರ ಮಂಡಲಗಳ ಅಲ್ಪಸಂಖ್ಯಾತ ಜನರ ಕಷ್ಟಗಳಿಗೆ ಸ್ಪಂದಿಸಲು ಕೂಡ ಮುಸ್ಲಿಂಲೀಗ್ ತಯಾರಾಗಲಿಲ್ಲ ಎಂದು ರವೀಶ ತಂತ್ರಿ ವಿವರಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಶಿಸ್ತುಬದ್ಧ ಸಂಘಟನೆಯಾಗಿದೆ. ಇದುವರೆಗೆ ಸಂಘವು ಎಲ್ಲೂ ಕೂಡ ಗಲಭೆಯೆಬ್ಬಿಸಿದ ಒಂದೇ ಒಂದು ಕುರುಹು ಕೂಡ ಇಲ್ಲ. ಆದರೂ ಆರ್‍ಎಸ್‍ಎಸ್‍ನ್ನು ಮಂಜೇಶ್ವರ ಎಂಎಲ್‍ಎ ತರಾಟೆಗೆತ್ತಿಕೊಂಡಿರುವುದು ಅವರ ನಿಜ ಸ್ವರೂಪವನ್ನು ಬಯಲುಗೊಳಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಆಕ್ರೋಶದಿಂದ ನುಡಿದರು.
ಆರ್‍ಎಸ್‍ಎಸ್‍ನ ಪೋಷಣೆಯಲ್ಲಿರುವ ಯಾವುದೇ ವಿದ್ಯಾಲಯಗಳಲ್ಲಿ ದೇಶ ವಿರೋಧಿ ಚಟುವಟಿಕೆಯನ್ನು ಖಂಡಿತವಾಗಿಯೂ ಹೇಳಿ ಕೊಡುತ್ತಿಲ್ಲ. ದೇಶಭಕ್ತ ಶಿಕ್ಷಣ ಮಾತ್ರ ನೀಡಲು ಸಂಘಕ್ಕೆ ಸಾಧ್ಯವಿದೆ. ಆದರೆ ಕೆಲವು ಅನ್ಯಮತೀಯ ವಿದ್ಯಾಲಯಗಳಲ್ಲಿ ಕೋಮುಭಾವನೆ ಹರಡಿಸುವ ಪಾಠಗಳನ್ನು ಹೇಳಿ ಕೊಡುತ್ತಿರುವುದು ಈಗಾಗಲೇ ಸಾಬೀತುಗೊಂಡಿದೆ. ಇದಕ್ಕೆದುರಾಗಿ ಮುಸ್ಲಿಂಲೀಗ್ ಯಾವುದೇ ಚಕಾರವೆತ್ತುತ್ತಿಲ್ಲ ಎಂಬುವುದಾಗಿ ರವೀಶ ತಂತ್ರಿ ಹೇಳಿದ್ದಾರೆ.
ಹೆಸರಿನಲ್ಲೇ ಮತವನ್ನು ಉಲ್ಲೇಖಿಸಿರುವ ರಾಜಕೀಯ ಪಕ್ಷವೊಂದರ ಜನಪ್ರತಿನಿಯು ಆರ್‍ಎಸ್‍ಎಸ್‍ಗೆ ಮತೇತರತ್ವದ ಕುರಿತಾಗಿ ಪಾಠ ಮಾಡುವ ಅಗತ್ಯವಿಲ್ಲ. ಈ ದೇಶದ ಹಲವಾರು ಉನ್ನತ ಸ್ಥಾನಗಳನ್ನು ವಹಿಸಿಕೊಂಡಿರುವುದು ಆರ್‍ಎಸ್‍ಎಸ್ ಎಂಬ ಸಂಘಟನೆಯಿಂದ ಬೆಳೆದು ಬಂದವರು ಎಂಬುದನ್ನು ಮಂಜೇಶ್ವರ ಶಾಸಕರು ಮರೆತಂತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




