ಕಾಸರಗೋಡು: ಕೇಂದ್ರ ಚುನಾವಣೆ ಆಯೋಗದ ಮತದಾತರ ಪಟ್ಟಿ ನಿರೀಕ್ಷಕ ಬಿಜು ಪ್ರಭಾಕರ್ ಬುಧವಾರ ಕಾಸರಗೋಡು ಜಿಲ್ಲೆಗೆ ಆಗಮಿಸಿದರು. ಇಲ್ಲಿನ ಚಟುವಟಿಕೆಗಳ ಅವಲೋಕನವನ್ನು ಅವರು ಈ ವೇಳೆ ನಡೆಸಿದರು. ನ.28,29,30 ರಂದು ಬಿ.ಎಲ್.ಒ ಗಳ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಲು ಅವರು ಆದೇಶ ನೀಡಿದ್ದಾರೆ.
ಪ್ರತ್ಯೇಕ ಸಂಕ್ಷೀಪ್ತ ಮತದಾತರ ಪಟ್ಟಿ ನವೀಕರಣ ಯಜ್ಞ-2022 ಅಂಗವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಅವಲೋಕನ ಸಂಬಂಧ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಶಾಸಕರ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ, ಸಿಬ್ಬಂದಿಯ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಬೂತ್ ಮಟ್ಟದಲ್ಲಿ ಸಹಾಯಕರ ಪಟ್ಟಿಯನ್ನು ಪೂರ್ಣಗೊಳಿಸಿಲ್ಲ. ನ.30ರ ಮುಮಚಿತವಾಗಿ ಎಲ್ಲ ರಾಜಕೀಯ ಪಕ್ಷಗಳು ಬಿ.ಎಲ್.ಒ.ಗಳ ಪಟ್ಟಿ ಸಲ್ಲಿಸುವಂತೆ ಅವರು ಆದೇಶದಲ್ಲಿ ತಿಳಿಸಿದರು. ಕರಾವಳಿ ಪ್ರದೇಶಗಳಲ್ಲಿ, ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳನ್ನು ಚುರುಕುಗೊಳಿಸುವಂತೆ, ಫೀಲ್ಡ್ ವೇರಿಫಿಕೇಷನ್ ಪೂರ್ಣಗೊಳಿಸಬೇಕಿರುವ ಸಿಬ್ಬಂದಿ ಕಡ್ಡಾಯವಾಗಿ ಈ ಕಾಯಕ ಪೂರ್ತಿಗೊಳಿಸುವಂತೆ ಅವರು ತಿಳಿಸಿದರು.
ನ.8ರಂದು ಪ್ರಕಟಿಸಿರುವ ಕರಡು ಮತದಾತರ ಪಟ್ಟಿಯಲ್ಲಿ ಅನೇಕ ಲೋಪದೋಷಗಳಿರುವುದಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆರೋಪಿಸಿದರು. ದೇಲಂಪಾಡಿ ಗ್ರಾಮ ಪಂಚಾಯತ್ ನಲ್ಲಿ ಮಲೆಯಾಳಂ ತಿಳಿಯದೇ ಇರುವವರೇ ಬಹುಮಂದಿಯಿದ್ದು, ಅವರಿಗೆ ಕನ್ನಡದಲ್ಲಿ ಮತದಾತರ ಪಟ್ಟಿ ಒದಗಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಗ್ರಹಿಸಿದರು.
ಈ ದೂರುಗಳ ಬಗ್ಗೆ ಕೇಂದ್ರ ಚುನಾವನೆ ಆಯೋಗಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿದ ನಿರೀಕ್ಷಕ ಕಾಸರಗೊಡುಜಿಲ್ಲೆಯಲ್ಲಿ ಪ್ರತ್ಯೇಕ ಸಂಕ್ಷಿಪ್ತ ಮತದಾತರ ಪಟ್ಟಿ ನವೀಕರಣ ಯಜ್ಞ ಶಿಬಿರಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದು ನುಡಿದರು.
ಸಭೆಯಲ್ಲಿ ಶಾಸಕ ಇ.ಚಂದ್ರಶೇಖರನ್, ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಸೂರ್ಯನಾರಾಯಣನ್, ತಹಸೀಲ್ದಾರರಾದ ಎ.ವಿ.ರಾಜನ್, ಪಿ.ಜೆ.ಆಂಟೋ, ಎನ್.ಮಣಿರಾಜ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮೂಸಾ ಬಿ.ಚೆರ್ಕಳ, ಕೆ.ಆರ್.ಜಯಾನಂದ, ವಿ.ರಾಜನ್, ಪಿ.ರಮೇಶ್, ಎಂ.ಕುಂಞಂಬು ನಂಬ್ಯಾರ್, ಇತರ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

