ಕಾಸರಗೋಡು: ವಿಪತ್ತು ನಿರ್ವಹಣಾ ದಳ ವತಿಯಿಂದ ಅಣಕು ಕಾರ್ಯಾಚರಣೆ ಡಿ. 15ರಂದು ಬೆಳಗ್ಗೆ 8ಕ್ಕೆ ಬೇಕಲಕೋಟೆ ವಠಾರದಲ್ಲಿ ಜರುಗಲಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸೇನೆ(ಎನ್‍ಡಿಆರ್‍ಎಫ್)ಯ ನಾಲ್ಕನೇ ಬೆಟಾಲಿಯನ್ ವತಿಯಿಂದ ಅಣಕು ಕಾರ್ಯಾಚರಣೆ ಅಯೋಜಿಸಲಾಗಿದೆ.
ಅಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ದೇಶದ ಇತಿಹಾಸ ಪ್ರಸಿದ್ಧ ಕೇಂದ್ರಗಳಲ್ಲಿ ಎನ್‍ಡಿಆರ್‍ಎಫ್ ಅಣಕು ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಬೇಕಲ ಕೋಟೆಯನ್ನು ಆಯ್ಕೆಮಾಡಲಾಗಿದೆ. ಭೂಕಂಪ ಸಂಭವಿಸಿದಲ್ಲಿ ಸನಿಹದ ಕಟ್ಟಡದಲ್ಲಿ ಸಂಕಷ್ಟಕ್ಕೆ ಸಿಲುಕುವ ಹತ್ತು ಮಂದಿಯನ್ನು ಪಾರುಮಾಡುವ ಬಗ್ಗೆ ಅಣಕು ಕಾರ್ಯಾಚರಣೆ ನಡೆಯಲಿದೆ. ಕಟ್ಟಡದೊಳಗೆ ಸಿಲುಕಿಕೊಳ್ಳುವವರನ್ನು ರಕ್ಷಿಸಿ, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುವ ಬಗ್ಗೆ ವಿಶೇಷ ತರಬೇತಿ ಪಡೆದ ಎನ್‍ಡಿಆರ್‍ಎಫ್ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್‍ಡಿಆರ್‍ಎಫ್ ಇನ್ಸ್ಪೆಕ್ಟರ್ ಅರ್ಜುನ್‍ಪಾಲ್ ರಜಪೂತ್ ತಿಳಿಸಿದ್ದಾರೆ.
ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್‍ಚಂದ್ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎ.ಕೆ ರಮೇಂದ್ರನ್, ಎನ್‍ಡಿಆರ್‍ಎಫ್ ಇನ್ಸ್ಪೆಕ್ಟರ್ ಅರ್ಜುನ್‍ಪಾಲ್ ರಜಪೂತ್ ಉಪಸ್ಥಿತರಿದ್ದರು.




