ಲಖನೌ: ಈ ಚಿತ್ರದಲ್ಲಿ ಐದು ಚಿನ್ನದ ಪದಕವನ್ನು ಕೊರಳಿಗೆ ಹಾಕಿಕೊಂಡು ಹೆಮ್ಮೆ ಪಡುತ್ತಿರುವಾಕೆಯ ಹೆಸರು ಗಜಾಲಾ. ಲಖನೌ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿನಿ ಇಷ್ಟೂ ಪದಕ ಪಡೆದಿರುವುದು ಸಂಸ್ಕೃತ ಭಾಷೆಯಲ್ಲಿ. ಅದರಲ್ಲಿಯೂ ವಿಶೇಷವೆಂದರೆ ಈಕೆ ಓರ್ವ ಮುಸ್ಲಿಂ ವಿದ್ಯಾರ್ಥಿನಿ.
ಸಂಸ್ಕೃತ ಭಾಷೆ ಕಲಿಕೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಪ್ರಶಸ್ತಿ ಸ್ವೀಕರಿಸಿರುವ ಜತೆಗೆ, ಸಂಸ್ಕೃತ ವಿಭಾಗದಲ್ಲಿಯೇ ಮಾಡಿದ ವಿವಿಧ ಸಾಧನೆಗಾಗಿ ಒಟ್ಟು 5 ಚಿನ್ನದ ಪದಕಗಳ ಈಕೆ ಪಡೆದಿದ್ದಾಳೆ. ಬಾಲ್ಯದಿಂದಲೇ ನೋವು, ಬಡತನದಲ್ಲಿಯೇ ಬೆಳೆದ ಗಜಾಲಾ ಸಂಸ್ಕೃತ ಮಾತ್ರವಲ್ಲದೇ ಇಂಗ್ಲಿಷ್, ಹಿಂದಿ, ಉರ್ದು, ಅರೇಬಿಕ್ ಭಾಷೆಗಳಲ್ಲಿಯೂ ಪ್ರಾವೀಣ್ಯತೆ ಪಡೆದಿದ್ದಾಳೆ.
2021ರ ನವೆಂಬರ್ನಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗಜಾಲಾಗೆ ಚಿನ್ನದ ಪದಕ ಘೋಷಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ನಡೆದ ಸಮಾರಂಭದಲ್ಲಿ ಇವಳಿಗೆ ಪದಕ, ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಗಜಾಲಾ ಎಸ್‌ಎಸ್‌ಎಲ್‌ಸಿಯಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡಳು. ಕ್ಯಾನ್ಸರ್ನಿಂದ ತಂದೆ ಮೃತಪಟ್ಟಾಗ ಇಡೀ ಕುಟುಂಬ ನಲುಗಿ ಹೋಗಿತ್ತು. ಮೂವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳ ಸಂಸಾರ ಸಾಗಿಸಿಕೊಂಡು ಹೋಗುವುದು ಈ ಕುಟುಂಬಕ್ಕೆ ಬಹು ಭಾರವೇ ಆಗಿತ್ತು. ಆದರೆ ಪ್ರೈಮರಿಯಿಂದಲೂ ಸಂಸ್ಕೃತ ಭಾಷೆಯನ್ನು ಕೇಳಿ ಅದಕ್ಕೆ ಮಾರುಹೋಗಿದ್ದ ಗಜಾಲಾ ಶಿಕ್ಷಣವನ್ನು ಮುಂದುವರೆಸುವ ಆಸೆ ವ್ಯಕ್ತಪಡಿಸಿದ್ದಳು. ಈಕೆಯ ಸಹೋದರ, ಸಹೋದರಿಯರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರೂ ಗಜಾಲಾ ಮಾತ್ರ ಮುಂದೆ ಓದಿದಳು.
ಸಂಸ್ಕೃತ ದೈವಿ ಭಾಷೆ. ಆದ್ದರಿಂದ ಇದನ್ನೇ ಆಯ್ಕೆ ಮಾಡಿಕೊಂಡೆ ಎನ್ನುವ ಗಜಾಲಾ, ಬೆಳಗ್ಗೆ 5 ಗಂಟೆಗೇ ಎದ್ದು ಮೊದಲು ನಮಾಜ್ ಮಾಡಿ, ಮನೆಕೆಲಸಗಳನ್ನು ಮಾಡುವ ಗಜಾಲಾ, ದಿನಕ್ಕೆ ಏಳು ತಾಸು ಸಂಸ್ಕೃತಾಭ್ಯಾಸ ಮಾಡುತ್ತಿದ್ದಳು. ಗಾಯತ್ರಿ ಮಂತ್ರ, ಸಂಸ್ಕೃತ ಶ್ಲೋಕ, ಸರಸ್ವತಿ ಮಂತ್ರ ಎಲ್ಲವನ್ನೂ ದಿನವೂ ಅಭ್ಯಾಸ ಮಾಡುತ್ತಿದ್ದಳು.
ನಾನು ಮುಸ್ಲಿಂ ಆಗಿರುವ ಕಾರಣ, ಸಂಸ್ಕೃತ ಕಲಿತಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ನನ್ನ ಅಮ್ಮ, ಸಹೋದರ, ಸಹೋದರಿಯರು ನನ್ನ ಕಲಿಕೆಗೆ ನೆರವಾದರು. ನನ್ನ ಇಬ್ಬರು ಸೋದರರು ಮೆಕ್ಯಾನಿಕ್ ಕೆಲಸ ಮಾಡುತ್ತಾರೆ. ಸೋದರಿಯೊಬ್ಬಳು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರೆಲ್ಲರೂ ನನಗೆ ಓದಲು ಸಂಪೂರ್ಣ ಸಹಕಾರ ನೀಡಿದ್ದಾರೆ, ಅವರ ಸಹಾಯವಿಲ್ಲದೆ ಇದ್ದರೆ ಓದು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಅನೇಕ ಸ್ನೇಹಿತರೂ ನನಗೆ ಸ್ಫೂರ್ತಿ ತುಂಬಿದರು ಎಂದು ಗಜಾಲಾ ಹೇಳುತ್ತಾಳೆ.
ಸಂಸ್ಕೃತ ಭಾಷೆಯ ಪ್ರಾಧ್ಯಾಪಕರಾಗುವುದು, ವೇದ ಸಾಹಿತ್ಯದಲ್ಲಿ ಪಿಎಚ್ಡಿ ಮಾಡುವುದು ಸದ್ಯ ಈಕೆಗಿರುವ ಕನಸು.

