ಪೆರ್ಲ: ಪಡ್ರೆ ಚಂದು ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಅರುವ ಕೊರಗಪ್ಪ ಶೆಟ್ಟಿ ಭಾಜನರಾಗಿದ್ದಾರೆ.ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 17ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿವೃತ್ತ ಹಿರಿಯ ಯಕ್ಷಗಾನ ಕಲಾವಿದ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾವಿದ ನರೇಂದ್ರ ಕುಮಾರ್ ಧರ್ಮಸ್ಥಳ ಅವರಿಗೆ ವಿಶೇಷ ಪ್ರಶಸ್ತಿ, ಹಿರಿಯ ಯಕ್ಷಗಾನ ಹಿಮ್ಮೇಳ ಗುರು ಸುಬ್ರಹ್ಮಣ್ಯ ಭಟ್ ಮಾಂಬಾಡಿ ಅವರಿಗೆ ತೆಂಕಬೈಲು ಭಾಗವತ ಪ್ರಶಸ್ತಿ, ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣಾಯ ಅವರಿಗೆ ಚೇವಾರು ಕಾಮತ್ ಪ್ರಶಸ್ತಿ, ಹಿರಿಯ ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಅವರಿಗೆ ಅಡ್ಕಸ್ಥಳ ಮಾಯಿಲೆಂಗಿ ಸಂಜೀವ ಶೆಟ್ಟಿ ಪ್ರಶಸ್ತಿ ಹಾಗೂ ಹಿರಿಯ ಯಕ್ಷಗಾನ ಮತ್ತು ಪ್ರಸಾದನ ಕಲಾವಿದ ರಾಮ ಜೋಡುಕಲ್ಲು ಅವರಿಗೆ ದೇವಕಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರು ವಿಶ್ವ ವಿದ್ಯಾನಿಲಯ ಯಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯ ಡಾ.ಧನಂಜಯ ಕುಂಬ್ಖೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿದರು.ನಿವೃತ್ತ ಮುಖ್ಯ ಶಿಕ್ಷಕ ಮತ್ತು ಹಿರಿಯ ಯಕ್ಷಗಾನ ಕಲಾವಿದ ಪಶುಪತಿ ಶಾಸ್ತಿ ಶಿರಂಕಲ್ಲು ಅಧ್ಯಕ್ಷತೆ ವಹಿಸಿದರು.ಯಕ್ಷಗಾನ ಕಲಾಪೋಷಕ, ನಿವೃತ್ತ ಉಪನ್ಯಾಸಕ, ಯನ್.ಕೆ.ರಾಮಚಂದ್ರ ಭಟ್ ಅಭಿನಂದನಾ ಭಾಷಣ ಮಾಡಿದರು.
ನ್ಯಾಯವಾದಿ, ಕಲಾಪೋಷಕ ಪ್ರಕಾಶ ನಾರಾಯಣ ಚೆಡ್ಡು, ಉಪನ್ಯಾಸಕ, ಯಕ್ಷಗಾನ ಕಲಾವಿದ ಡಾ.ಶ್ರುತಕೀರ್ತಿರಾಜ ಉಜಿರೆ, ಮುಡಿಪು ಸರ್ಕಾರಿ ಪಿಯು ಕಾಲೇಜು ಜೀವಶಾಸ್ತ್ರ ಉಪನ್ಯಾಸಕ ಡಾ.ಅಶ್ವಿನ್ ತೇಜಸ್ವಿ ಉಚ್ಚಿಲ, ಚಿನ್ಮಯ ಕಲಾಕೇಂದ್ರ ಮೂಡುಬಿದಿರೆ ಅಧ್ಯಕ್ಷ ಎಮ್.ಗೋವರ್ಧನ, ಕರ್ನಾಟಕ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿ ಹಿರಿಯ ಪ್ರಬಂಧಕ ಜಗದೀಶ್ ಬಲ್ಲಾಳ್ ಉಪಸ್ಥಿತರಿದ್ದರು.ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷ ಸಬ್ಬಣಕೋಡಿ ರಾಮ ಭಟ್ ಸ್ವಾಗತಿಸಿ, ಶ್ರೇಯಸ್ ಗಣೇಶ್ ಬೆಂಗಳೂರು ವಂದಿಸಿದರು. ಉದಯ ಕುಮಾರ್ ಸ್ವರ್ಗ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, ಮಧ್ಯಾಹ್ನ ಮೂಡುಬಿದಿರೆ ಚಿನ್ಮಯ ಕಲಾಕೇಂದ್ರದ ಸದಸ್ಯರ ಮೀನಾಕ್ಷಿ ಕಲ್ಯಾಣ, ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ನಿರ್ದೇಶನದಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ 'ಚಕ್ರ ಚಂಡಿಕೆ', 'ಕದಳೀವನದೊಳುಮದದಾನೆ ಹೊಕ್ಕಂದದಲಿ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.




