ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಹಗಲು ರಾತ್ರಿ ಜಾಗರಣೆಯೊಂದಿಗೆ ಭಜನಾ ಸೇವೆಯನ್ನು ವಿಶೇಷವಾದ ದೀಪಜ್ಯೋತಿಯನ್ನು ಬೆಳಗಿಸಿ ಸಂಭ್ರಮ ಭಕ್ತಿ ಶ್ರದ್ಧೆಯಿಂದೊಡಗೂಡಿ ಭಾವೈಕತೆಯಿಂದ ಆಚರಿಸಲಾಯಿತು.
ಉಷ:ಕಾಲ ಪೂಜಾನಂತರ ಪವಿತ್ರ ಪಾಣಿ ವೇ.ಮೂ. ವಾಸುದೇವ ಭಟ್‍ರವರ ನೇತೃತ್ವದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷವಾಗಿ ದೀಪಜ್ಯೋತಿಯನ್ನು ಬೆಳಗಿಸಿ ಹಗಲು ಅಹೋರಾತ್ರಿ ಭಜನಾ ಸೇವೆ ನಡೆಯಿತು. ಪರಿವಾರ ದೇವರುಗಳಾದ ಶ್ರೀಮಹಾಗಣಪತಿ, ಶ್ರೀ ರಾಮವಿಠಲ, ವನಶಾಸ್ತಾವೇಶ್ವರ ನಾಗದೇವರ ಗುರುವರ್ಯರ ಸನ್ನಿಧಿಗಳಲ್ಲಿ ವಿಶೇಷ ಪೂಜಾದಿಗಳನ್ನು ನೆರವೇರಿಸಲಾಯಿತು. ಶ್ರೀ ಕ್ಷೇತ್ರಾಧಿಪತಿ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆ, ಕ್ಷೀರಾಭಿಷೇಕ, ದಧಿ ಘೃತ ಮಧು ಶರ್ಕರಗಳೆಂಬ 5 ದೃವ್ಯಗಳಿಂದ ಪಂಚಾಮೃತಾಭಿಷೇಕ, ನಾಳಿಕೇರ ಜಲಧಾರೆಯೊಂದಿಗೆ ಏಕಾದಶ ರುದ್ರಾಭಿಷೇಕ ನಡೆಯಿತು. . ಸ್ವರ್ಣ ರಜತ ಪುಷ್ಪಾಲಂಕಾರಗಳೊಂದಿಗೆ ಸರ್ವಾಭರಣ ಸರ್ವಾಲಂಕಾರ ವಿಶೇಷ ಅರ್ಚನಾ ಸೇವೆ ದೀಪಾರಾಧನೆ ಕಾರ್ತಿಕ ಪೂಜೆ ವಿಶೇಷವಾಗಿ ಕರಿಮೆಣಸಿನ ಪಾನಕದೊಂದಿಗೆ ನೈವೇದ್ಯವನ್ನು ಸಮರ್ಪಣೆ ನಡೆಯಿತು. ಶ್ರೀಕ್ಷೇತ್ರದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ತಲೇಕಳ ಹಾಗೂ ಸದಸ್ಯರು ನೇತೃತ್ವ ವಹಿಸಿದ್ದರು.

