ರಾಜ್ಯಗಳು ಧಾರ್ಮಿಕ ಮತ್ತು ಭಾಷಿಕ ಸಮುದಾಯಗಳನ್ನು, ತಮ್ಮ ಗಡಿವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯ ಎಂದು ಘೋಷಿಸಬಹುದು. ಮಹಾರಾಷ್ಟ್ರ ಸರ್ಕಾರವು ಯಹೂದಿಗಳನ್ನು ಅಲ್ಪಸಂಖ್ಯಾತರು ಎಂದು 2016ರಲ್ಲಿ ಘೋಷಿಸಿದೆ. ಕರ್ನಾಟಕವು ಉರ್ದು, ತೆಲುಗು, ತಮಿಳು, ಮಲಯಾಳ, ಮರಾಠಿ, ತುಳು, ಲಂಬಾಣಿ, ಹಿಂದಿ, ಕೊಂಕಣಿ, ಗುಜರಾತಿ ಭಾಷೆಗಳನ್ನು ಅಲ್ಪಸಂಖ್ಯಾತರ ಭಾಷೆಗಳು ಎಂದು ಘೋಷಿಸಿದೆ' ಎಂದು ಸರ್ಕಾರವು ಹೇಳಿದೆ.
'ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶೈಕ್ಷಣಿಕ ಸಂಸ್ಥೆಗಳನ್ನು, ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಸಂಸ್ಥೆಗಳು ಎಂದು ಘೋಷಿಸಬಹುದು' ಎಂದೂ ಸರ್ಕಾರವು ಹೇಳಿದೆ.
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಹೀಗೆ ಹೇಳಿದೆ. 'ಲಡಾಖ್, ಮಿಜೋರಾಂ, ಲಕ್ಷದ್ವೀಪ, ಕಾಶ್ಮೀರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಪಂಜಾಬ್ ಮತ್ತು ಮಣಿಪುರದಲ್ಲಿ ಯಹೂದಿ, ಬಹಾಯಿ ಮತ್ತು ಹಿಂದೂ ಧರ್ಮಗಳನ್ನು ಅನುಸರಿಸುವವರ ಸಂಖ್ಯೆ ತೀರಾ ಕಡಿಮೆ ಇದೆ. ಈ ಧರ್ಮದವರು, ಈ ರಾಜ್ಯಗಳಲ್ಲಿ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ' ಎಂದು ಅಶ್ವಿನಿ ತಮ್ಮ ಅರ್ಜಿಯಲ್ಲಿ ಹೇಳಿದ್ದರು.
'ಅರ್ಜಿದಾರರು ಹೇಳಿರುವುದು ತಪ್ಪು. ಈ ಸಮುದಾಯಗಳು ಆಯಾ ರಾಜ್ಯದಲ್ಲಿ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ, ನಿರ್ವಹಣೆ ಮಾಡಬಹುದು. ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಲು, ಆಯಾ ರಾಜ್ಯ ಸರ್ಕಾರಗಳು ಅಗತ್ಯ ಮಾರ್ಗಸೂಚಿಗಳನ್ನು ರಚಿಸಬಹುದು' ಎಂದು ಕೇಂದ್ರ ಸರ್ಕಾರವು ಹೇಳಿದೆ.
ಕಲ್ಯಾಣ ಕಾರ್ಯಕ್ರಮ ಎಲ್ಲರಿಗೂ ಅನ್ವಯವಲ್ಲ'
'ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು ಆ ಸಮುದಾಯದ ಎಲ್ಲರಿಗೂ ಅನ್ವಯವಾಗುವುದಿಲ್ಲ. ಬದಲಿಗೆ ಆಯಾ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಷ್ಟೇ ಅನ್ವಯವಾಗುತ್ತದೆ' ಎಂದು ಕೇಂದ್ರ ಸರ್ಕಾರವು ಹೇಳಿದೆ.
ಅಲ್ಪಸಂಖ್ಯಾತರಿಗೆಂದು ನಡೆಸಲಾಗುತ್ತಿರುವ ಯೋಜನೆಗಳ ಫಲ, ಕೆಲವು ರಾಜ್ಯಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ದೊರೆಯುತ್ತಿಲ್ಲ ಎಂದು ಅರ್ಜಿದಾರರು ಸಲ್ಲಿಸಿದ್ದ ಆಕ್ಷೇಪಕ್ಕೆ, ಸರ್ಕಾರವು ಈ ಪ್ರತಿಕ್ರಿಯೆ ನೀಡಿದೆ.




