HEALTH TIPS

ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕ: ಮತ್ತೆ ಹೋರಾಟಕ್ಕೆ ಕಿಡಿಹಚ್ಚಿದ ಸರ್ಕಾರದ ಆದೇಶ: ಇಂದು ಪ್ರತಿಭಟನೆ

             ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ಕನ್ನಡಿಗರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿದೆ. ಕುಂಬಳೆ ಸನಿಹದ ಅಂಗಡಿಮೊಗರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಭೌತಶಾಸ್ತ್ರ ವಿಭಾಗಕ್ಕೆ ಮಲಯಾಳ ಮಾಧ್ಯಮ ಶಿಕ್ಷಕನನ್ನು ನೇಮಿಸಿ ಹೊರಡಿಸಿರುವ ಆದೇಶ ಕನ್ನಡಿಗರನ್ನು ಮತ್ತೆ ಕೆರಳಿಸಿದೆ.

         ಈ ಹಿಂದೆ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರನ್ನು ನೇಮಿಸುವುದರ ವಿರುದ್ಧ ಕನ್ನಡಪರ ಸಂಘಟನೆಗಳು, ಹೆತ್ತವರು ಹಾಗೂ ಪಿಟಿಎ ಸಮಿತಿ ಧ್ವನಿಯೆತ್ತುತ್ತಿದ್ದಂತೆ ತನ್ನ ನಿಲುವಿನಿಂದ ಹಿಂದೆ ಸರಿದಿದ್ದ ಸರ್ಕಾರ, ಮತ್ತೆ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಕಸೇವಾ ಆಯೋಗ 2014ರ ಬ್ಯಾಚ್‍ನಲ್ಲಿ ನಡೆಸಿದ ಪರೀಕ್ಷೆ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ 23ಮಂದಿ ಅಧ್ಯಾಪಕರ ಪೈಕಿ ಕನ್ನಡಿಗರ ವಿರೋಧದ ನಡುವೆಯೂ ಎಂಟು ಮಂದಿಗೆ ಮೂರು ವರ್ಷದ ಹಿಂದೆ ನೇಮಕಾತಿ ನೀಡುವ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿತ್ತು. ಕನ್ನಡಿಗರ ವಿರೋಧ ಹಾಗೂ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ ಕನ್ನಡ ಮಾಧ್ಯಮಕ್ಕೆ ನೇಮಕಗೊಂಡ ಕೆಲವು ಶಿಕ್ಷಕರನ್ನು ವರ್ಗಾವಣೆಗೊಳಿಸಿದರೆ, ಇನ್ನು ಕೆಲವರನ್ನು ಮೈಸೂರಿನ ಪ್ರಾದೇಶಿಕ ಭಾಷಾ ಕೇಂದ್ರಕ್ಕೆ ಕನ್ನಡ ನೋಯಿಂಗ್ ಸರ್ಟಿಫಿಕೇಟ್ ಕಲಿಕೆಗಾಗಿ ಕಳುಹಗಿಸಿಕೊಟ್ಟಿತ್ತು!

          ಕೋವಿಡ್ ಹಿನ್ನೆಲೆಯಲ್ಲಿ ಆನ್‍ಲೈನ್‍ಗೆ ಸೀಮಿತವಾಗಿದ್ದ ತರಗತಿ ಇತ್ತೀಚೆಗಷ್ಟೆ ಪೂರ್ಣ ರೂಪದಲ್ಲಿ ಆಫ್‍ಲೈನ್ ತರಗತಿ ಆರಂಭಗೊಂಡಿದೆ. ಇನ್ನು ಹತ್ತು-ಹದಿನೈದು ದಿವಸದೊಳಗೆ ಪರೀಕ್ಷೆ ಆರಂಭಗೊಳ್ಳಬೇಕಾಗಿದ್ದು, ಇದರ ನಡುವೆ ಸರ್ಕಾರ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿಯ ದುಸ್ಸಾಹಸಕ್ಕೆ ಕೈಹಾಕಿರುವುದು ಕನ್ನಡಿಗರನ್ನು ಕೆರಳಿಸಿದೆ. ಕೋಟ್ಟಾಯಂನ ಮಲಯಾಳ ಶಿಕ್ಷಕನನ್ನು ಅಚ್ಚ ಕನ್ನಡ ಪ್ರದೇಶ ಅಂಗಡಿಮೊಗರಿನ ಭೌತಶಾಸ್ತ್ರ ಕನ್ನಡ ಮಾಧ್ಯಮಕ್ಕೆ ನೇಮಿಸಿ ಫೆ. 28ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಅಧ್ಯಾಪಕಗೆ ಕನ್ನಡದ ಗಂಧಗಾಳಿ ಗೊತ್ತಿಲ್ಲ. ಇತ್ತ ವಿದ್ಯಾರ್ಥಿಗಳಿಗೆ ಈ ಶಿಕ್ಷಕನ ಮಲಯಾಳ ಬೋಧನೆ ಅರ್ಥೈಸಿಕೊಳ್ಳಲಾಗದ ಸ್ಥಿತಿಯಿದೆ. ಒಟ್ಟಿನಲ್ಲಿ ಇಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಲುಕಿಕೊಂಡ ಪರಿಸ್ಥಿತಿ ಎದುರಿಸುತ್ತಿದ್ದಾರೆ.

                           ನ್ಯಾಯಾಲಯ ಆದೇಶಕ್ಕಿಲ್ಲದ ಕಿಮ್ಮತ್ತು:

          2014ರಲ್ಲಿ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನ ಎದುರಿಸಿದ್ದ ಶಿಕ್ಷಕರಲ್ಲಿ ಮೊದಲ ಹಂತದಲ್ಲಿ ಎಂಟು ಮಂದಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದ್ದು, ಪ್ರಸಕ್ತ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ವಿರುದ್ಧ 2016ರಲ್ಲಿ ಕೇರಳ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದ್ದು, ಕಾಸರಗೋಡು ಸಂವಿಧಾನಾತ್ಮಕವಾಗಿ ಭಾಷಾ ಅಲ್ಪಸಂಕ್ಯಾತ ಸ್ಥಾನಮಾನ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಮಾತ್ರಕ್ಕೂ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರನ್ನು ನೇಮಿಸದಿರುವಂತೆ ತಿಳಿಸಿತ್ತು. ಪ್ರಸಕ್ತ 2014ರ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕನ್ನಡ ವಿದ್ಯಾರ್ಥಿಗಳ ಪಾಲಿಗೆ ಈ ಆದೇಶಕ್ಕೆ ಯಾವುದೇ ಕಿಮ್ಮತ್ತಿಲ್ಲದ ಸ್ಥಿತಿಯಿದೆ.

                  ಇಂದು ಪ್ರತಿಭಟನೆ:

           ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕರ ನೇಮಕಾತಿ ವಿರುದ್ಧ ಕನ್ನಡ ವಿದ್ಯಾರ್ಥಿಗಳ ಹೆತ್ತವರು ಹಾಗೂ ಪಿಟಿಎ ಸಮಿತಿ ಅಂಗಡಿಮೊಗರು ಶಾಲಾ ವಠಾರದಲ್ಲಿ ಮಾ 9ರಂದು ಬೆಳಗ್ಗೆ 10ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು ತಮ್ಮ ಬೆಂಬಲ ಕ್ತಪಡಿಸಿದೆ. ಯಾವುದೇ ಮಾತ್ರಕ್ಕೂ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕರ ನೇಮಕಾತಿಗೆ ಅನುವು ಮಾಡಿಕೊಡುವುದಿಲ್ಲ ಎಂಬುದಾಗಿ ಹೆತ್ತವರು ಹಾಗೂ ಪಿಟಿಎ ಪದಾಧಿಕಾರಿಗಳು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries