ಕಾಸರಗೋಡು: ಯೂಕ್ರೇನ್ ಯುದ್ಧಭುಮಿಯಲ್ಲಿ ಸಿಲುಕಿಕೊಂಡಿದ್ದ ಕಾಸರಗೋಡು ವಿದ್ಯಾನಗರ ನಿವಾಸಿ ಮಹಮ್ಮದ್ ಶರೀಫ್-ನಿಲೋಫರ್ ದಂಪತಿ ಪುತ್ರಿ ರೆನಾ ಶೆರೀಫ್ ಮಂಗಳವಾರ ಮನೆಗೆ ತಲುಪಿದ್ದಾರೆ. ಯುದ್ಧ ತೀವ್ರಗೊಳ್ಳುತ್ತಿದ್ದಂತೆ ರೆನಾ ಶೆರೀಫ್ ಅವರು ಮಾ. 1 ರಂದೇ ಪ್ರಯಾಣ ಆರಂಭಿಸಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ದಿನದಂದು ಮನೆಗೆ ಬಂದು ಸೇರಿದ್ದು, ಹೆತ್ತವರು ಹಾಗೂ ಸಂಬಂಧಿಕರು ಈ ಸಂತೋಷವನ್ನು ಆಚರಿಸಿಕೊಂಡರು.
ಯೂಕ್ರೇನ್‍ನಲ್ಲಿ ತಾನು ವಾಸವಿದ್ದ ಜಾಗದ ಅನತಿ ದೂರದಲ್ಲಿ ಸಿಡಿಯುತ್ತಿದ್ದ ಬಾಂಬ್, ಸಿಡಿತಲೆಗಳ ಶಬ್ದದಿಂದ ಆಕಾಶ ಕಳಚಿ ಬಿದ್ದಂತಾಗುತ್ತಿತ್ತು. ಸ್ಪೋಟ ತೀವ್ರಗೊಳ್ಳುತ್ತಿದ್ದಂತೆ ನಮ್ಮೆಲ್ಲರನ್ನು ಬಂಕರ್‍ನೊಳಗೆ ಕಳುಹಿಸಿದ್ದರು, ನಂತರ ಭಾರತ ಸರ್ಕಾರ ಕೈಗೊಂಡ ಕಾರ್ಯಾಚರಣೆಯನ್ವಯ ತಾಯ್ನಾಡಿಗೆ ಬಂದು ಸೇರಿದ್ದೇವೆ ಎಂದು ರೆನಾಶೆರೀಫ್ ತನ್ನ ಅನುಭವ ಹಂಚಿಕೊಂಡಿದ್ದಾರೆ.




