ಕುಂಬಳೆ: ಕುಂಬ್ಳೆ ಸಮೀಪದ ಮುಜುಂಗಾವಿನಲ್ಲಿ ನೂತನವಾಗಿ ನಿರ್ಮಿಸಲಾದ ತಾಮ್ರಕಜೆ ಕುಲಾಲ ಬಂಜನ್ ಗೋತ್ರ ತರವಾಡು ಮನೆಯ ಗೃಹಪ್ರವೇಶ, ವೆಂಕಟರಮಣ ದೇವರ ಮುಡಿಪುಪೂಜೆ, ದೈವಗಳ ಪ್ರತಿಷ್ಠೆ ಹಾಗೂ ದೈವಕೋಲ ಕಾರ್ಯಕ್ರಮಗಳು ಎ.5, 6ರಂದು ನಡೆಯಲಿದೆ.
ಪುರಾತನ ಕಾಲದಲ್ಲಿ ವಿಟ್ಲ ಸೀಮೆಯ ಎರುಂಬು ಎಂಬಲ್ಲಿದ್ದ ತರವಾಡು ಆ ಬಳಿಕ ಕುಂಬ್ಳೆ ಸೀಮೆಯ ಮುಜುಂಗಾವಿಗೆ ಸ್ಥಳಾಂತರಗೊಂಡಿತ್ತು. ಇದೀಗ ಮುಜುಂಗಾವು ದೇವಾಲಯ ಪರಿಸರದಲ್ಲಿ ತರವಾಡು ಮನೆಯನ್ನು ಸ್ವತಂತ್ರವಾಗಿ ನಿರ್ಮಿಸಲಾಗಿದ್ದು ದೈವಗಳ ಪ್ರತಿಷ್ಠೆ, ಕೋಲ ನಡೆಯಲಿದೆ.
ಎ.5ರಂದು ಮಂಗಳವಾರಸಂಜೆ 5ಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತುಹೋಮ ಮತ್ತು ವೈದಿಕ ಕ್ರಿಯೆಗಳೊಂದಿಗೆ ಕಾರ್ಯಕ್ರಮಕ್ಕೆ ನಾಂದಿಯಾಗಲಿದೆ. ಬಳಿಕ ಸಂಜೆ 6ಕ್ಕೆ ಈಗಿರುವ ತರವಾಡು ಮನೆಯಿಂದ ವಾದ್ಯಘೋಷಗಳೊಂದಿಗೆರ ದೈವಗಳ ಸಾನ್ನಿಧ್ಯವನ್ನು ನೂತನ ತರವಾಡು ಮನೆಗೆ ತರಲಾಗುವುದು. ಬಳಿಕ ಪೀಠಾಧಿವಾಸ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಎ.6ರಂದು ಬೆಳಿಗ್ಗೆ 6.25ರಿಂದ 6.50ರೊಳಗಿನ ಮೀನಲಗ್ನ ಶುಭಮುಹೂರ್ತದಲ್ಲಿ ತರವಾಡು ಮನೆಯ ಗೃಹಪ್ರವೇಶ ನಡೆಯಲಿದೆ. ಬೆಳಿಗ್ಗೆ 8.50ರಿಂದ 10.49ರ ಒಳಗಿನ ಮುಹೂರ್ತದಲ್ಲಿ ವೆಂಕಟರಮಣ ದೇವರ ಮುಡಿಪು ಪೂಜೆ, ದೈವಗಳ ಪ್ರತಿಷ್ಠೆ ಹಾಗೂ ಜೀವಕಲಾಭಿಷೇಕ ನಡೆಯಲಿದೆ. 11ರಿಂದ ದೈವಗಳಿಗೆ ತಂಬಿಲ, ನಿತ್ಯ ನೈಮಿತ್ತಿಕ ನಿಶ್ಚಯ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ಸಂಜೆ 4.50ಕ್ಕೆ ಕೊರತ್ತಿ ಅಮ್ಮನ ಕೋಲ ನಡೆಯಲಿದೆ. 7ಕ್ಕೆ ದೈವಗಳ ಭಂಡಾರ ಕೊಡಿಯಡಿ ಏರಲಿದ್ದು, 8ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ 9ರಿಂದ ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ ದೈವಗಳ ಕೋಲ ಜರಗಲಿದೆ. ಎ.7ರಂದು ಮುಂಜಾವ 4.30ಕ್ಕೆ ಶ್ರೀ ದೈವಗಳ ಶ್ರೀಮುಡಿ ಪ್ರಸಾದ, 5.30ಕ್ಕೆ ಗುಳಿಗ ದೈವದ ಕೋಲದೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ.




