ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಜರ್ಮನಿ ಜಿ7 ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವಲ್ಲಿ ಹಿಂದೇಟು ಹಾಕುತ್ತಿರುವ ಭಾರತದ ನಡೆಯನ್ನು ಮುಂದಿಟ್ಟುಕೊಂಡು, ಜೂನ್‌ನಲ್ಲಿ ನಡೆಯಲಿರುವ ಜಿ-7 ದೇಶಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜರ್ಮನಿ ಚರ್ಚೆ ನಡೆಸುತ್ತಿದೆ ಎಂಬ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಈ ಊಹಾಪೋಹಗಳ ನಡುವೆಯೇ ಜರ್ಮನಿ ತನ್ನ ದೇಶದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದೆ.
ಮೂಲಗಳ ಪ್ರಕಾರ ಭಾರತ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ, ಸೆನೆಗಲ್ ಮತ್ತು ಇಂಡೋನೇಷ್ಯಾವನ್ನೂ ಕೂಡ ಜೂನ್ 26 ರಿಂದ 28 ರ ನಡುವೆ ಬವೇರಿಯನ್ ಆಲ್ಪ್ಸ್‌ನ ಸ್ಕ್ಲೋಸ್ ಎಲ್ಮೌನಲ್ಲಿ ನಡೆಯಲಿರುವ ಶೃಂಗಸಭೆಗೆ ಆಹ್ವಾನಿಸುವ ಸಾಧ್ಯತೆಯಿದೆ. ಉ7ಗೆ ಜರ್ಮನಿ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ ವಹಿಸಿದೆ. ಉ7 ಸದಸ್ಯ ರಾಷ್ಟ್ರಗಳಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್, ಕೆನಡಾ ಮತ್ತು ಇಟಲಿ ದೇಶಗಳು ಸೇರಿವೆ.
ಇದು 2019 ರಿಂದ ಉ7 ಗೆ ಭಾರತದ ಸತತ ನಾಲ್ಕನೇ ಆಹ್ವಾನವಾಗಿದ್ದು, ಭಾರತವನ್ನು 2019 ರಲ್ಲಿ ಸೌಹಾರ್ದ ಪಾಲುದಾರರಾಗಿ ಫ್ರಾನ್ಸ್ ಆಹ್ವಾನಿಸಿತ್ತು, 2020 ರಲ್ಲಿ ಅಮೆರಿಕ ಭಾರತವನ್ನು ಆಹ್ವಾನಿಸಿತ್ತು (ಸಾಂಕ್ರಾಮಿಕ ರೋಗದಿಂದಾಗಿ ಇದು ರದ್ದುಗೊಂಡಿತ್ತು) ಮತ್ತು ಬ್ರಿಟನ್ ಸಹ ಭಾರತವನ್ನು ಆಹ್ವಾನಿಸಿತು, ಆದರೆ ಕೋವಿಡ್ ಕಾರಣದಿಂದಾಗಿ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದರು.
"ಶೃಂಗಸಭೆಗೆ ಎರಡು ತಿಂಗಳಿಗಿಂತ ಹೆಚ್ಚು ಕಾಲಾವಕಾಶವಿದೆ. ಈ ಚರ್ಚೆಗೆ ಕಾರಣವೇನು ಎಂಬುದನ್ನು ನಾವು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಉಕ್ರೇನ್‌ನಲ್ಲಿನ ಸಂಘರ್ಷದ ನಡುವೆ ರಷ್ಯಾ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಜಗತ್ತು ಒತ್ತಡದಲ್ಲಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಯಿಂದ ಮಾತ್ರ ಶಾಂತಿಯನ್ನು ಸಾಧಿಸಲು ಸಾಧ್ಯ ಎಂದು ಭಾರತ ಪ್ರತಿಪಾದಿಸುತ್ತಿದೆ.
"ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರು ಪರಸ್ಪರ ನೇರವಾಗಿ ಮಾತನಾಡಲು ಮತ್ತು ಸಂವಾದದ ಮೂಲಕ ಪರಿಹಾರವನ್ನು ಪಡೆಯಲು ನಾನು ಪದೇ ಪದೇ ಕೇಳಿದ್ದೇನೆ" ಎಂದು ಪ್ರಧಾನಿ ಮೋದಿ ಇತ್ತೀಚೆಗೆ 2+2 ಮಂತ್ರಿ ಶೃಂಗಸಭೆಯ ಮೊದಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ವರ್ಚುವಲ್ ಸಭೆಯಲ್ಲಿ ಹೇಳಿದ್ದರು.
ಪ್ರಧಾನಿ ಮೋದಿ ಅವರು ಮುಂದಿನ ತಿಂಗಳು 6 ನೇ ಇಂಡೋ ಜರ್ಮನ್ ಅಂತರ-ಸರ್ಕಾರಿ ಸಮಾಲೋಚನೆಗಾಗಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.




.jpg)
