ಕಾಸರಗೋಡು: ಬೆಂಗಳೂರಿನಿಂದ ಕಳವುಗೈದ ಕಾರನ್ನು ವಶಪಡಿಸಿಕೊಂಡಿರುವ ಕಾಸರಗೋಡು ನಗರಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಡಿಕೇರಿ ನಿವಾಸಿ ಆಶಿಕ್, ಸಮದ್ ಹಾಗೂ ಕಾರು ಕಳವಿಗೆ ಸಹಾಯ ಒದಗಿಸಿದ ಕುಂಬಳೆ ನಿವಾಸಿ ಸೇರಿದಂತೆ ಮೂವರು ಬಂಧಿತರು. ಬೆಂಗಳೂರು ದಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸೂರಿನಿಂದ ಕಾರು ಕಳವುಗೈಯಲಾಗಿದ್ದು, ಈ ಬಗ್ಗೆ ಕಾರಿನ ಮಾಲಿಕ ಕಾಶಿಫ್ ಮಾಹಿನ್ ಖಾನ್ ಎಂಬವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ವೇಳೆ ಕಾರು ಕಾಸರಗೋಡಿನತ್ತ ಸಂಚರಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ನಗರಠಾಣೆ ಇನ್ಸ್‍ಪೆಕ್ಟರ್ ಅಜಿತ್ ನೇತೃತ್ವದ ಪೊಲೀಸರ ತಂಡ ಸೀತಾಂಗೋಳಿಯಲ್ಲಿ ಕಾರ್ಯಾಚರಣೆ ನಡೆಸಿ ಪರಾರಿಯಾಗಲೆತ್ನಿಸಿದ ಕಾರನ್ನು ಸಹಸಕರ ರೀತಿಯಲ್ಲಿ ಹಿಂಬಾಲಿಸಿ, ಅದರಲ್ಲಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಂಧಿತರನ್ನು ಬೆಂಗಳೂರಿನ ಪೊಲೀಸರ ವಶಕ್ಕೊಪ್ಪಿಸಲಾಗಿದೆ.





