ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ಖ್ಯಾತ ಯಕ್ಷಗಾನ ಕಲಾವಿದ ಕೀರ್ತಿಶೇಷ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ ಅವರ ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಳೆ 'ದಾನಶೂರ ಕರ್ಣ' ಜರಗಿತು. ಸೇವಾರೂಪವಾಗಿ ಕೀರಿಕ್ಕಾಡು ನಾರಾಯಣ ಭಟ್ "ಚೈತನ್ಯ" ಎಣ್ಮೂರು ಹಾಗೂ ಮನೆಯವರ ವತಿಯಿಂದ ಸಂಯೋಜಿಸಲ್ಪಟ್ಟ ಈ ಸಾಂಸ್ಕೃತಿಕ ಕಲಾ ಕಾರ್ಯಕ್ರಮದ ಮೊದಲಿಗೆ ಸ್ಥಳಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು.
ಸಂಜೆ ಸಂಘದ ಅಧ್ಯಕ್ಷ ಡಾ. ಕೆ. ರಮಾನಂದ ಬನಾರಿ ಮಂಜೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಂಸ್ಮರಣಾ ಸಭೆ ನಡೆಯಿತು. ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಅಲ್ಲಿನ ಪ್ರಾಧ್ಯಾಪಕ ಡಾ. ಕೆ. ಸೂರ್ಯನಾರಾಯಣ, ಹಿರಿಯ ಅರ್ಥಧಾರಿ ಬೆಳ್ಳಿಪ್ಪಾಡಿ ಸದಾಶಿವ ರೈ, ಎ.ಜಿ.ಮುದಿಯಾರು ಅವರು ಸುಬ್ರಹ್ಮಣ್ಯ ಭಟ್ ಅವರ ಸಂಸ್ಮರಣೆ ಗೈದು ಸಂದರ್ಭೋಚಿತವಾಗಿ ಮಾತನಾಡಿದರು.
ಸಂಘದ ಅಧ್ಯಕ್ಷರು ಡಾ. ಬನಾರಿಯವರು ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರ ಶ್ರುತಿಬದ್ಧವಾದ ಪಾತ್ರತನ್ಮಯತೆಯ ಅರ್ಥಗಾರಿಕೆಯ ವೈಶಿಷ್ಟ್ಯವನ್ನು ಸೋದಾಹರಣವಾಗಿ ವಿವರಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಮತ್ತು ನಡೆಯಬೇಕಾದ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಿದರು. ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಮನಮೋಹನ ಬನಾರಿ, ಚಂದ್ರಶೇಖರ ಏತಡ್ಕ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಎ.ಆರ್ ಗಾಯತ್ರಿ ಅವರಿಂದ ಪ್ರಾರ್ಥನೆ ಹಾಡಿದರು. ಕೆ.ಎನ್ ಅಭಿಷೇಕ್ ಸ್ವಾಗತಿಸಿ ದೇಲಂಪಾಡಿಯ ಯಂ.ರಮಾನಂದ ರೈ ವಂದಿಸಿದರು.
ಬಳಿಕ ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು. ದಯಾನಂದ ಬಂದ್ಯಡ್ಕ, ನಿತೀಶ್ ಕುಮಾರ್ ಎಂಕಣ್ಣಮೂಲೆ, ದಯಾನಂದ ಪಾಟಾಳಿ ಮಯ್ಯಾಳ ಅವರು ಭಾಗವತರಾಗಿ ಸಹಕರಿಸಿದರು. ಕುಮಾರ ಸುಬ್ರಹ್ಮಣ್ಯ ವಳಕುಂಜ, ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಅವರು ಚೆಂಡೆ ಮದ್ದಳೆಯಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಕೆ. ಸೂರ್ಯನಾರಾಯಣ ಪುತ್ತೂರು, ಡಿ.ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಯಂ.ರಮಾನಂದ ರೈ ದೇಲಂಪಾಡಿ, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ಕೆ. ಗಣೇಶ ಶರ್ಮ ಸಿದ್ಧಕಟ್ಟೆ, ಐತ್ತಪ್ಪ ಗೌಡ ಮುದಿಯಾರು, ರಾಮನಾಯ್ಕ ದೇಲಂಪಾಡಿ ಅವರು ತಮ್ಮ ಪ್ರತಿಭಾ ಪಾಂಡಿತ್ಯದಿಂದ ತಾಳಮದ್ದಳೆಯನ್ನು ಯಶಸ್ವಿಗೊಳಿಸಿದರು. ವಿಶ್ವ ವಿನೋದ ಬನಾರಿ ಸಹಕರಿಸಿದರು.




