ಕಾಸರಗೋಡು: ಜಿಲ್ಲೆಯ ನೆಕ್ರಾಜೆ ಗ್ರಾಮದ ಸಂತಾನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ 7ರಿಂದ 15ರ ವರೆಗೆ ನಡೆಯಲಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿ ಪ್ರೊ. ಎ.ಶ್ರೀನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಗುಲದ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ವನಶಾಸ್ತಾರ ಗುಡಿ ಸೇರಿದಂತೆ ಹಲವು ಕಾಮಗಾರಿಗಳನ್ನೊಳಗೊಂಡಂತೆ ಸುಮಾರು 3ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿದೆ. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. 7ರಂದು ಬೆಳಗ್ಗೆ 10ಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯುವುದು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯೀ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ವಿವಿಧ ದಿನಗಳಲ್ಲಿ ಆಶೀರ್ವಚನ ನೀಡುವರು. ಮೇ 12ರಂದು ಬೆಳಗ್ಗೆ 4ಕ್ಕೆ 108ಕಾಯಿ ತೆಂಗಿನಕಾಯಿ ಹೋಮ, 8.22ರಿಂದ 9.05ರ ಸುಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಠೆ, 15ರಂದು ಬೆಳಗ್ಗೆ 9.52ರಿಂದ 10.22ರ ಸುಮುಹೂರ್ತದಲ್ಲಿ 1008ಬ್ರಹ್ಮಕಲಶಾಭಿಷೇಕ ನಡೆಯುವುದು. ಪ್ರತಿದಿನ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ನಿತ್ಯಾನಂದ ನೆಲ್ಲಿತ್ತಲ, ಪ್ರವೀಣ್ ಶೆಟ್ಟಿ ನೆಕ್ರಾಜೆ, ಚೈತ್ರೇಶ್ ನೆಕ್ರಾಜೆ ಉಪಸ್ಥಿತರಿದ್ದರು.





