ಕುಂಬಳೆ : ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಯೋಗಪ್ರದರ್ಶನ ನಡೆಯಿತು. ಶಡ್ರಂಪ್ಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ, ಯೋಗಪಟು ಶಂಕರ ಭಟ್ ಮರಿಮನೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯೋಗವು ಮಾನಸಿಕ ಆರೋಗ್ಯ ಹಾಗೂ ಶಾರೀರಿಕ ದೃಢತೆಗೆ ಸಹಕಾರಿಯಾಗುವುದರೊಂದಿಗೆ ವ್ಯಕ್ತಿಯ ವಿಕಾಸಕ್ಕೆ ಸಹಕಾರಿ ಎಂದು ತಿಳಿಸುತ್ತಾ ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳೇಬೇಕೆಂದು ಕರೆನೀಡಿದರು.
ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಯೋಗದ ಆದಿ ಗುರುಗಳಾದ ಪತಂಜಲಿಯನ್ನು ಸ್ಮರಿಸುತ್ತಾ ಇಡೀ ವಿಶ್ವವು ಮನೆಯಾದರೆ ಭಾರತವು ದೇವರಕೋಣೆ ಎಂದು ಹೇಳಿದ ಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾತುಗಳನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು. ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್. ರಾವ್ ಮನ್ನಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಾಪಕ ಹರಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು. ವಿದ್ಯಾರ್ಥಿ ಮನೀಶ್ ಕುಮಾರ್ ಸ್ವಾಗತಿಸಿ, ಜತನ್ ಸಿ ವಂದಿಸಿದರು. ಆಡಳಿತ ಮಂಡಳಿ,ಅಧ್ಯಾಪಕ ವೃಂದ,ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





