ತಿರುವನಂತಪುರಂ: ರಾಜಧಾನಿ ತಿರುವನಂತಪುರಂನ ಕೈಥಮುಕ್ಕು ಎಂಬಲ್ಲಿ 2008ರಲ್ಲಿ ನಡೆದ ಸಿಪಿಐ(ಎಂ) ಕಾರ್ಯಕರ್ತ ವಿ ವಿ ವಿಷ್ಣು ಹತ್ಯೆ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದ್ದ 13 ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ಕೇರಳ ಹೈಕೋರ್ಟ್ ಮಂಗಳವಾರ ದೋಷಮುಕ್ತಗೊಳಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಮ್ಮನ್ನು ಅಪರಾಧಿಗಳು ಎಂದು ಘೋಷಿಸಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರೆಸ್ಸೆಸ್ ಕಾರ್ಯಕರ್ತರು ಹೈಕೋರ್ಟಿನ ಮೆಟ್ಟಿಲೇರಿದ್ದರು. ಮಂಗಳವಾರ ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರ ಪೀಠವು 12 ಮಂದಿಯನ್ನು ದೋಷಮುಕ್ತಗೊಳಿಸಿದೆ. ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಈ ಪ್ರಕರಣದಲ್ಲಿ ವಿಧಿಸಲಾಗಿದೆ.
ತನಿಖೆಯ ಆರಂಭದಿಂದ ಅರ್ಧಸತ್ಯಗಳನ್ನು ಬಿಂಬಿಸಲು ಹಾಗೂ ಆಯ್ದ ಸಾಕ್ಷ್ಯಗಳನ್ನು ಹಾಜರುಪಡಿಸಿ ಪ್ರಕರಣವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ತೋರ್ಪಡಿಸಲು ಯತ್ನಿಸಲಾಗಿದೆ ಎಂದು ಪೀಠ ಹೇಳಿದೆ.
ದಾಳಿಯನ್ನು ಮುಸುಕುಧಾರಿ ವ್ಯಕ್ತಿಗಳು ಮಾಡಿರುವ ಸಾಧ್ಯತೆಯಿದ್ದರೂ ಈ ಅಂಶವನ್ನು ಪ್ರಾಸಿಕ್ಯೂಶನ್ ಉಲ್ಲೇಖಿಸಿಲ್ಲ, ಮೂವರು ತನಿಖಾಧಿಕಾರಿಗಳನ್ನು ಬೆನ್ನುಬೆನ್ನಿಗೆ ಐದು ತಿಂಗಳ ಅವಧಿಯಲ್ಲಿ ವರ್ಗಾಯಿಸಲಾಗಿದೆ. ಮೇಲಾಗಿ ಆರೋಪಿಗಳ ಶಾಮೀಲಾತಿ ಕುರಿತು ಸೂಕ್ತ ಸಾಕ್ಷ್ಯಗಳಿಲ್ಲದೇ ಇದ್ದರೂ ಸಹಜವೆಂಬಂತೆ ಅವರನ್ನು ಬಂಧಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿಚಾರಣೆಯಲ್ಲಿರುವ ನ್ಯೂನತೆಗಳು, ಕೆಲ ಸಾಕ್ಷಿಗಳ ಹೇಳಿಕೆಗಳನ್ನು ಗಮನಿಸಿದಾಗ ಪ್ರಕರಣದ ಕುರಿತು ಸಂಶಯಗಳನ್ನು ಮೂಡಿಸುತ್ತದೆ ಹಾಗೂ ಇದೇ ಕಾರಣಕ್ಕೆ ಕೆಳಗಿನ ಹಂತದ ನ್ಯಾಯಾಲಯ ದೋಷಿಗಳೆಂದು ಘೋಷಿಸಿದವರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಾಸಿಕ್ಯೂಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಂತೆ ವಿಷ್ಣು ಅವರನ್ನು ಆರೆಸ್ಸೆಸ್ ಕಾರ್ಯಕರ್ತರು 2008ರಲ್ಲಿ ತಿರುವನಂತಪುರಂ ಪಾಸ್‍ಪೋರ್ಟ್ ಕಚೇರಿ ಮುಂದೆ ಹತ್ಯೆಗೈದಿದ್ದರು ಹಾಗೂ ಇದು ಆರೆಸ್ಸೆಸ್ ಕಾರ್ಯಕರ್ತರ ಒಂದು ನಿರ್ದಿಷ್ಟ ಗುಂಪಿನ ಸಂಚಿನ ಭಾಗವಾಗಿ ನಡೆದ ಅಪರಾಧ ಎಂದೂ ಅವರು ವಾದಿಸಿದ್ದರು.