ಪೆರ್ಲ: ಜಿಲ್ಲೆಯ ಕುಂಬ್ಡಾಜೆ ಕಜಮಲೆ ನಿವಾಸಿ, ಉದಯ-ಸವಿತಾ ದಂಪತಿ ಪುತ್ರಿ ಏಳರ ಹರೆಯದ ಬಾಲಕಿ ಸಾನ್ವಿಯ ಜೀವ ಉಳಿಸಲು ಜಿಲ್ಲೆಯ ಜನತೆ ಕೈಜೋಡಿಸಿದ್ದಾರೆ. ತಲಸ್ಸೇಮಿಯಾದಿಂದ ಬಳಲುತ್ತಿರುವ ಸಾನ್ವಿಗೆ ಅಸ್ಥಿಮಜ್ಜೆ ಕಸಿ(ಬೋನ್ ಮ್ಯಾರೋ ಟ್ರಾನ್ಸ್‍ಪ್ಲಾಂಟೇಶನ್)ಚಿಕಿತ್ಸೆಗೆ ಹಣ ಸಂಗ್ರಹಿಸಲು ಜಾತಿ, ಧರ್ಮ, ಪಕ್ಷ ಮರೆತು ಊರಿಗೆ ಊರೇ ಒಟ್ಟಾಗಿ ನಿಲ್ಲುವ ಮೂಲಕ ನಾಡಿಗೆ ಆದರ್ಶದ ಸಂದೇಶವೊಂದನ್ನು ರವಾನಿಸಿದ್ದಾರೆ.
ಸಾನ್ವಿ ಚಿಕಿತ್ಸಾ ನಿಧಿ ಸಂಗ್ರಹ ಅಭಿಯಾನವನ್ನು ಜೂ. 19ರಿಂದ ಆರಂಭಿಸಲಾಗಿದ್ದು, ಬೆರಳೆಣಿಕೆಯ ದಿನಗಳಲ್ಲಿ ಸುಮಾರು 30ಲಕ್ಷ ರೂ. ಸಂಗ್ರಹಿಸುವ ಮೂಲಕ ಬಾಲಕಿಯ ಚಿಕಿತ್ಸೆಗೆ ನಾಗರಿಕ ಸಮಾಜ ಕೈಜೋಡಿಸಿದೆ.
ನಾರಂಪಾಡಿಯ ಫಾತಿಮಾ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಾನ್ವಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ಥಿಮಜ್ಜೆ ಕಸಿ ನಡೆಸಲೇ ಬೇಕಾಗಿದೆ. ವೈದ್ಯರ ಪ್ರಕಾರ ಚಿಕಿತ್ಸೆಗೆ ಸುಮಾರು 40ಲಕ್ಷ ರೂ. ವೆಚ್ಚ ತಗುಲಲಿದೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಹೆತ್ತವರಿಗೆ ಈ ಮೊತ್ತ ಒಟ್ಟುಗೂಡಿಸುವುದು ಅಸಾಧ್ಯದ ಮಾತಾಗಿತ್ತು. ಆದರೆ ಕುಂಬ್ಡಾಜೆಯ ನಾಗರಿಕ ಸಮಾಜ ಇದನ್ನು ಸವಾಲಾಗಿ ಸ್ವೀಕರಿಸಿ 'ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿ' ರಚಿಸಿ ಧನಸಂಗ್ರಹಕ್ಕೆ ಮುಂದಾಗಿದೆ. ಕುಂಬ್ಡಾಜೆಯ ಮಾರ್ಪನಡ್ಕದಿಂದ ಆರಂಭಗೊಂಡ ಅಭಿಯಾನ ಬದಿಯಡ್ಕ, ಬೆಳ್ಳುರು, ಕಾರಡ್ಕ, ಎಣ್ಮಕಜೆ, ಬದಿಯಡ್ಕ, ಚೆರ್ಕಳ ಹೀಗೆ ಜಿಲ್ಲೆಯ ನಾನಾ ಪಂಚಾಯಿತಿ ಜನರನ್ನು ತಲುಪಿದೆ. ಇದರೊಂದಿಗೆ ಸಂಘ ಸಂಸ್ಥೆಗಳು, ಆಟೋ ಚಾಲಕರು, ಪೊಲೀಸ್, ಶಾಲೆ, ಕುಟುಂಬಶ್ರೀ, ಸರ್ಕಾರಿ ಕಚೇರಿ ಹೀಗೆ ಎಲ್ಲ ಕಡೆಗಳಿಂದಲೂ ಹಣ ಸಂಗ್ರಹಿಸಲಾಗುತ್ತಿದೆ. ಖಾಸಗಿ ಬಸ್ ಮಾಲಿಕರು, ಆಟೋ ಚಾಲಕರು ತಮ್ಮ ಒಂದು ದಿನದ ಸಂಪೂರ್ಣ ಗಳಿಕೆಯನ್ನು ಸಾನ್ವಿ ಚಿಕಿತ್ಸಾ ನಿಧಿಗೆ ನೀಡುತ್ತಿದ್ದಾರೆ.
ಅಭೂತಪೂರ್ವ ಬೆಂಬಲ:
ಪೆರ್ಲ ಪೇಟೆಯಲ್ಲಿ ಬುಧವಾರ ಆಟೋರಿಕ್ಷಾ ಚಾಲಕರು ಸಾನ್ವಿ ಚಿಕಿತ್ಸಾ ನಿಧಿಗಾಗಿ ತಮ್ಮ ಒಂದು ದಿನದ ಗಳಿಕೆಯನ್ನು ಮೀಸಲಿರಿಸಿದ್ದಾರೆ. 20ಕ್ಕೂ ಹೆಚ್ಚು ಆಟೋ ಚಾಲಕರು ಸಾನ್ವಿ ಚಿಕಿತ್ಸಾ ನಿಧಿಗಾಗಿ ಕಾರುಣ್ಯ ಯಾತ್ರೆ ಆಯೋಜಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಶ್ವೇತಧ್ವಜ ಆಟೋ ಚಾಲಕರಿಗೆ ಹಸ್ತಾಂತರಿಸುವುದರ ಜತೆಗೆ ಆಟೋದಲ್ಲಿ ಸಂಚರಿಸಿ ತಮ್ಮ ದೇಣಿಗೆಯನ್ನು ನೀಡಿ ಕಾರುಣ್ಯ ಯಾತ್ರೆಗೆ ಚಾಲನೆ ನೀಡಿದರು. ಹಿರಿಯ ಟ್ಯಾಕ್ಸಿ, ಆಟೋ ಚಾಲಕರು, ವ್ಯಾಪಾರಿಗಳು, ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಾನ್ವಿ ಚಿಕಿತ್ಸೆಗೆ ನೆರವಾಗುವವರು....ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿ, ಕೇರಳ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ-40413101052286-ಐಎಫ್‍ಎಸ್‍ಸಿ-ಕೆಎಲ್‍ಜಿಬಿ0040413, ಗೂಗಲ್ ಪೇ: 8921968983.






