ಕಾಸರಗೋಡು: ಪರಿಶಿಷ್ಟ ಪಂಗಡಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಕೇರಳದ ಮೊದಲ ಮಾದರಿ ವಸತಿ ಕ್ರೀಡಾ ಶಾಲೆ ಕರಿಂದಳ ಇಎಂಆರ್‍ಎಸ್ ಶಾಲೆ ಉದ್ಘಾಟನೆಗೊಳ್ಳಲು ಸಿದ್ಧವಾಗಿದೆ. ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆಯು ಕಾಸರಗೋಡು ಜಿಲ್ಲೆಯ ಕ್ರೀಡೆಯ ಅಭಿವೃದ್ಧಿಗೆ ಒಂದು ಜಿಗಿತವಾಗಿದೆ. ಪರಿಶಿಷ್ಟ ಪಂಗಡದ ಅತ್ಯುತ್ತಮ ಕ್ರೀಡಾ ಪ್ರತಿಭೆಗಳನ್ನು ಹುಡುಕಿ ಅವರಿಗೆ ಉತ್ತಮ ಶಿಕ್ಷಣ ನೀಡುವುದು ಏಕಲವ್ಯ ಮಾದರಿ ವಸತಿ ಶಾಲೆಯ ಉದ್ದೇಶವಾಗಿದೆ. ಇದು ಕೇಂದ್ರ ಪರಿಶಿಷ್ಟ ಪಂಗಡಗಳ ಸಚಿವಾಲಯದ ಸಹಯೋಗದಲ್ಲಿ ಅನುಷ್ಠಾನಗೊಂಡ ಯೋಜನೆಯಾಗಿದೆ.
2018 ರಲ್ಲಿ, ಪರಪ್ಪ ಬ್ಲಾಕ್‍ನ ಕಿನಾನೂರು ಕರಿಂದಳ ಪಂಚಾಯತಿಯಲ್ಲಿ ಇಎಂಆರ್‍ಎಸ್ ಶಾಲೆಯನ್ನು ಮಂಜೂರು ಮಾಡಲಾಗಿತ್ತು. ಆಗ ಕಿನಾನೂರು ಕರಿಂದಳ ಗ್ರಾಮ ಪಂಚಾಯಿತಿಯಲ್ಲಿ 10 ಎಕರೆ ಕಂದಾಯ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಶಾಲಾ ಕಟ್ಟಡ, ಹಾಸ್ಟೆಲ್, ಸಿಬ್ಬಂದಿ ವಸತಿಗೃಹ, ಮೈದಾನ, ಈಜುಕೊಳ ಸೇರಿದಂತೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮತಿಯನ್ನೂ ಪಡೆಯಲಾಯಿತು. ಸದ್ಯ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಪ್ರಸ್ತುತ, ಶಾಲೆಯು ಮಡಿಕೈ ಕುಟ್ಟಪ್ಪನದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ, ಅಡುಗೆ ಕೋಣೆ, ಊಟದ ಕೋಣೆ, ಎರಡು ತರಗತಿ ಕೊಠಡಿ, ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ ಮುಂತಾದ ಸೌಲಭ್ಯಗಳಿವೆ. ಇಲ್ಲಿ ಮೈದಾನದ ಸೌಕರ್ಯ ಕಡಿಮೆ ಇರುವುದರಿಂದ ನೀಲೇಶ್ವರ ಇಎಂಎಸ್ ಕ್ರೀಡಾಂಗಣದಲ್ಲಿ ಕ್ರೀಡಾ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಶಾಲೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕವೂ ಪೂರ್ಣಗೊಂಡಿದೆ.
ಮಕ್ಕಳನ್ನು 6ನೇ ತರಗತಿಗೆ ಸೇರಿಸಲಾಗುತ್ತದೆ. 30 ಹುಡುಗರು ಮತ್ತು 30 ಹುಡುಗಿಯರಿಗೆ ಪ್ರವೇಶ ಅವಕಾಶ ಈಗಿದೆ. ಕೇರಳದಾದ್ಯಂತ ವಿವಿಧ ಕ್ರೀಡೆಗಳಲ್ಲಿ ಪ್ರಾವೀಣ್ಯತೆ ತೋರಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ಸಂದರ್ಶನ ಸೇರಿದಂತೆ ಸಂದರ್ಶನಗಳಲ್ಲಿ ಉತ್ತೀರ್ಣರಾದ ನಂತರ ಮಕ್ಕಳನ್ನು ಸೇರಿಸಲಾಗುತ್ತದೆ. 6ನೇ ತರಗತಿಯಿಂದ ಪ್ಲಸ್ ಟು ತರಗತಿವರೆಗೆ ಶಿಕ್ಷಣದ ಜತೆಗೆ ಅತ್ಯುತ್ತಮ ಕ್ರೀಡಾ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಪ್ರಸ್ತುತ 54 ಮಕ್ಕಳು ಪ್ರವೇಶ ಪಡೆದಿದ್ದಾರೆ. ಶಾಲೆಯು ಸಿ.ಬಿ.ಎಸ್. ಪಠ್ಯಕ್ರಮದಲ್ಲಿ ಅಧ್ಯಯನ ಅವಕಾಶವಿರುತ್ತದೆ.
ಪರಪ್ಪ ಗಿರಿಜನ ಅಭಿವೃದ್ಧಿ ಕಛೇರಿ ವ್ಯಾಪ್ತಿಯಲ್ಲಿರುವ ಮಾದರಿ ವಸತಿ ಕ್ರೀಡಾ ಶಾಲೆಯನ್ನು ಇಂದು(ಜುಲೈ 16) ಬೆಳಿಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಕಲ್ಯಾಣ, ದೇವಸ್ವಂ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೆ. ರಾಧಾಕೃಷ್ಣನ್ ಉದ್ಘಾಟಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಶಾಸಕ ಇ.ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮುಖ್ಯ ಭಾಷಣ ಮಾಡಲಿದ್ದಾರೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿರ್ದೇಶಕಿ ಟಿ.ವಿ.ಅನುಪಮಾ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಶಿಕ್ಷಣ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ನಿರ್ದೇಶನಾಲಯದ ಉಪನಿರ್ದೇಶಕ ಕೆ. ಕೃಷ್ಣಪ್ರಕಾಶ್, ಮಾಜಿ ಸಂಸದ ಪಿ ಕರುಣಾಕರನ್, ಮಾಜಿ ಶಾಸಕ ಎಂ ಕುಮಾರನ್, ಕಾಞಂಗಾಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಕೆ. ಮಣಿಕಂಠನ್, ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ, ಕಿನಾನೂರು ಕರಿಂದಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ, ಕಾಞಂಗಾಡ್ ಸಬ್ ಕಲೆಕ್ಟರ್ ಡಿ.ಮೇಘಶ್ರೀ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಶಕುಂತಲಾ, ಮಡಿಕೈ ಪಂಚಾಯಿತಿ ಉಪಾಧ್ಯಕ್ಷ ವಿ.ಪ್ರಕಾಶನ್, ಇಎಂಆರ್ ಎಸ್ ಪ್ರಾಂಶುಪಾಲ ಕೆ.ವಿ.ರವೀಂದ್ರನ್, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ನೌಕರರು ಮತ್ತಿತರರು ಭಾಗವಹಿಸಲಿದ್ದಾರೆ.




-EKALAVYA%20MODEL%20RESIDENTIAL%20SPORTS%20SCHOOL.jpeg)
