ಬದಿಯಡ್ಕ: ಸಾಹಿತಿ ಸುಂದರ ಬಾರಡ್ಕ ಅವರ "ನೆಲದನಿ" ಕೃತಿ ನೆಲಮೂಲ ಸಂಸ್ಕøತಿಯ ಕಥನವಾಗಿದೆ. ಅವರು ಸಂಸ್ಕøತಿಯನ್ನು ನೆಲಮೂಲದಿಂದ ಶೋಧಿಸಿದ್ದಾರೆ. ಆದ್ದರಿಂದ ಅವರಿಗೆ ಪರ್ಯಾಯ ಚರಿತ್ರೆಯನ್ನು ಹೊಸ ರೀತಿಯಲ್ಲಿ ಬರೆಯಲು ಸಾಧ್ಯವಾಗಿದೆ ಎಂದು ಸಾಹಿತಿ, ಚಿಂತಕ, ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಭಾನುವಾರ ನಡೆದ ಸುಂದರ ಬಾರಡ್ಕ ಅವರ ಲೇಖನಗಳ ಸಂಕಲನ " ನೆಲದನಿ" ಯನ್ನು ಬಿಡುಗಡೆಗೊಳಿಇಸ ಅವರು ಮಾತನಾಡಿದರು.
ಕಾರಣಾಂತರಗಳಿಂದ ಹೊರನಾಡಿಗರಾದವರು ಕನ್ನಡ ಕಳೆದು ಹೋಗುತ್ತಿರುವ ಬಗೆಗೆ ಕಳವಳ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಇಂದು ಕನ್ನಡಕ್ಕೆ ಒಳನಾಡಿನಲ್ಲೂ ಆಪತ್ತು ಉಂಟಾಗಿದೆ. ಶಿಕ್ಷಣ ಮಾಧ್ಯಮ, ತ್ರಿಭಾಷಾ ಸೂತ್ರಗಳು ಕನ್ನಡಕ್ಕೆ ಉಪಕಾರ ಮಾಡಿಲ್ಲ. ಸಣ್ಣ ಭಾಷೆಗಳಂತೂ ಸಾವಿನಂಚಿಗೆ ತಲಪಿದೆ. ಇಂತಹ ಸ್ಥಿತಿಯಲ್ಲಿ ಸುಂದರ ಬಾರಡ್ಕ ಅವರು ಬದಿಯಡ್ಕದಲ್ಲಿದ್ದು ಕನ್ನಡದಲ್ಲಿ ಬರೆಯವುದು ಮತ್ತು ಕಾರ್ಯಕ್ರಮ ಆಯೋಜಿಸುವುದು ಮಹತ್ವದ್ದು ಎಂದು ಡಾ.ಬಿಳಿಮಲೆ ಶ್ಲಾಘಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ, ಸಂಶೋಧಕಿ ರಾಜಶ್ರೀ ಟಿ.ರೈ ಪೆರ್ಲ ಕೃತಿಯ ಬಗ್ಗೆ ಮಾತನಾಡಿದರು. ಕೇರಳ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹಮ್ಮದ್ ಹುಸೈನ್ ಪೈವಳಿಕೆ, ಸಾಮಾಜಿಕ ಕಾರ್ಯಕರ್ತೆ ಆಯಿಷಾ ಎ.ಎ.ಪೆರ್ಲ, ರಂಗಕರ್ಮಿ, ಶಿಕ್ಷಕ ಉದಯ ಸಾರಂಗ್ ಶುಭಹಾರೈಸಿದರು. ರತ್ನಾಕರ ಓಡಂಗಲ್ಲು, ವಸಂತ ಬಾರಡ್ಕ, ಸುಜಾತಾ ಕನಿಯಾಲ ಭಾವಗೀತೆಗಳನ್ನು ಹಾಡಿದರು. ಕೃತಿಕರ್ತ ಸುಂದರ ಬಾರಡ್ಕ ಕೃತಜ್ಞತೆ ವ್ಯಕ್ತಪಡಿಸಿದರು. ಅಗಲಿದ ದಲಿತ ಮುಖಂಡ, ಸಾಮಾಜಿಕ ಕಾರ್ಯಕರ್ತ ಡೀಕಯ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ವನಜಾಕ್ಷಿ ಚೆಂಬ್ರಕಾನ ವಂದಿಸಿದರು. ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಾ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
.jpg)
