ಪೆರ್ಲ : ಸಮಾಜದ ಅಶಕ್ತ ಜನತೆಗೆ ಸಹಾಯ ಒದಗಿಸುತ್ತಿರುವ ಸಂಘಟನೆ ಅಮೃತದೀಪ ಪೆರ್ಲ ವತಿಯಿಂದ 'ಅಮೃತದೀಪ ಕೆಸರು ಗದ್ದೆ ಉತ್ಸವ-2022' ಬಜಕೂಡ್ಲು ಬಯಲಿನ ಅನೋರ್ದಿ ಗದ್ದೆಯಲ್ಲಿ ಅದ್ದೂರಿಯಾಗಿ ನೆರವೇರಿತು. ನಿರಂತರ ಸುರಿಯುತ್ತಿದ್ದ ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಕೆಸರುಗದ್ದೆಯಲ್ಲಿ ಮಿಂದೆದ್ದರು. ಗ್ರಾಮೀಣ ಸೊಗಡು ಮೈಗೂಡಿಸಿಕೊಂಡು ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಕೆಸರಿನಲ್ಲಿ ಓಟ, ಹಗ್ಗಜಗ್ಗಾಟ, ಮಡಕೆ ಒಡಯುವುದು, ವಾಲಿಬಾಲ್, ಸಂಗೀತಕುರ್ಚಿ, ಗೋಪುರ ನಿರ್ಮಾಣ, ಹಾಳೆ ಎಳೆಯುವುದು ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಿತು. ಆಟಿ ಕಳಂಜ ಕುಣಿತ, ಕೊಂಬು ಮೇಳ ಕೆಸರುಗದ್ದೆ ಉತ್ಸವಕ್ಕೆ ಮೆರಗು ನೀಡಿತು.
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಚಂದ್ರಶೇಖರ ನಾವಡ ಸಮಾರಂಭ ಉದ್ಘಾಟಿಸಿದರು. ಕೆಸರುಗದ್ದೆ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಪಂ ಸದಸ್ಯೆ ಉಷಾಗಣೇಶ್, ಮಂಗಳೂರು ಆಕಾಶವಾಣಿಯ ಅಕ್ಷತಾರಾಜ್ ಪೆರ್ಲ, ನಿವೃತ್ತ ಮುಖ್ಯ ಶಿಕ್ಷಕ ಸದಾನಂದ ಶೆಟ್ಟಿ ಕುದ್ವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಕೃಷಿಕ ಹಮೀದ್ ನಡುಬೈಲ್, ಅಮೃತದೀಪ ಸಂಚಾಲಕ ಉದಯ ಚೆಟ್ಯಾರ್ ಬಜಕೂಡ್ಲು ಉಪಸ್ಥಿತರಿದ್ದರು. ಕೃಷ್ಣ ಶ್ಯಾನುಭಾಗ್ ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಮೃತದೀಪ ಅಧ್ಯಕ್ಷ ಶ್ರೀಕಾಂತ್ ಬಜಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಡಾ, ಕೇಶವ ನಾಯ್ಕ್ ಖಂಡಿಗೆ, ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪೆರ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಜಕೂಡ್ಲು, ಪ್ರಗತಿಪರ ಕೃಷಿಕರಾದ ವಾಮನ ನಾಯ್ಕ್ ಬಜಕೂಡ್ಲು, ಬಾಲಕೃಷ್ಣ ಕುಲಾಲ್ ಉಪಸ್ಥಿತರಿದ್ದರು. ಸತೀಶ್ ಮೂಡಿತ್ತಾಯ ಸ್ವಾಗತಿಸಿದರು. ದೀಕ್ಷಿತ್ ಶೆಟ್ಟಿ ವಂದಿಸಿದರು. ಪದ್ಮನಾಭ ಸುವರ್ಣ, ಟಿ. ಪ್ರಶಾಂತ್, ಪುಷ್ಪರಾಜ ರೈ ಕಾರ್ಯಕ್ರಮ ನಿರೂಪಿಸಿದರು.






