ಬದಿಯಡ್ಕ: ನಮ್ಮೊಳಗಿನ ತಪ್ಪನ್ನು ತಿದ್ದಿಕೊಂಡು ಪ್ರಜ್ಞಾವಂತರಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಮಾನಸಿಕವಾಗಿ ಸದೃಢರಾಗಿ ನಾಡಿನ ಜನತೆಗೆ ಒಳಿತನ್ನು ಮಾಡುವ ಕಾರ್ಯಗಳಿಗೆ ಸದಾ ಬೆಂಬಲವನ್ನು ನೀಡುತ್ತಾ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಸೌಪರ್ಣಿಕ ನವಜೀವನ ಸಮಿತಿ, ಬದಿಯಡ್ಕ ಇವರ ನೇತೃತ್ವದಲ್ಲಿ ಪೆರಡಾಲ ಶ್ರೀ ಉದನೇಶ್ವರ ಸಭಾಭÀವನದಲ್ಲಿ ಜರಗಿದ 1584ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾದಕ ವ್ಯಸನಗಳಿಂದ ಮುಕ್ತರಾಗಿ ಮಾತಾಪಿತೃಗಳಿಗೆ ಉತ್ತಮ ಮಕ್ಕಳಾಗಿ, ಹೆಂಡತಿಗೆ ಒಳ್ಳೆಯ ಗಂಡನಾಗಿ, ಮಕ್ಕಳನ್ನು ಪ್ರೀತಿಯಿಂದ ಸಲಹುವ ತಂದೆಯಾಗಿ ಮುಂದಿನ ಜೀವನವನ್ನು ರೂಢಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಹಿತವಚನವನ್ನು ನೀಡಿದರು.
ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳಾದ ಫಾ. ಸ್ಟ್ಯಾನಿ ಪಿರೇರಾ, ಅಬ್ದುಲ್ ಜಲೀಲ್ ಯು.ಪಿ.ತಂಙಳ್ ಪಟ್ಟಾಂಬಿ ದಿವ್ಯ ಉಪಸ್ಥಿತಿಯಿದ್ದು, ಹಿತವಚನಗಳನ್ನಾಡಿದರು.
1584ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಬದಿಯಡ್ಕ ಇದರ ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿ.ಪೂ. ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವತ್ಥ್ ಪೂಜಾರಿ ಲಾಲ್‍ಬಾಗ್, ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್, ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಬಿರದ ಪ್ರಧಾನ ಸಂಚಾಲಕ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಚಾಲಕ, ತಾಲೂಕು ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ, ಯೋಗೀಶ್ ಆಚಾರ್ಯ ವಂದಿಸಿದರು. ಪ್ರಸಿಲ್ಲಾ ಡಿಸೋಜ ಸಂದೇಶ ವಾಚನ ಮಾಡಿದರು. ಬದಿಯಡ್ಕ ವಲಯ ಮೇಲ್ವಿಚಾರಕ ಶಿಬಿರದ ಕಾರ್ಯದರ್ಶಿ ದಿನೇಶ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.






