ನವದೆಹಲಿ: ಕೇರಳ ಸೇರಿದಂತೆ ದೇಶದ ವಿವಿಧೆಡೆ ನಾಯಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಪ್ರಾಣಿ ಹಕ್ಕುಗಳ ಸಂಘಟನೆಗಳು ಜಂತರ್ ಮಂತರ್‌ನಲ್ಲಿ ರ್ಯಾಲಿ ನಡೆಸಿದವು.
40ಕ್ಕೂ ಹೆಚ್ಚು ಪ್ರಾಣಿ ಹಕ್ಕು ಸಂಘಟನೆಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯು ಈ ರ್ಯಾಲಿಯನ್ನು ಆಯೋಜಿಸಿತ್ತು.
ಸಂಘಟನೆಗಳಲ್ಲದೆ ನೂರಾರು ಮಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಸಮಾಜದಲ್ಲಿ ಪ್ರಾಣಿ ಕಲ್ಯಾಣ ಗಟ್ಟಿಯಾಗಬೇಕು. ಅದಕ್ಕೆ ಸಹಾನುಭೂತಿಯ ಶಕ್ತಿ ತೋರಿಸಲು ಹಲವರು ಮುಂದಾಗಿದ್ದಾರೆ. ಅದರಲ್ಲಿ ಬಹಳ ಸಂತೋಷವಿದೆ ಎಂದು ಪಿಎಫ್‌ಎ ಸಂಸ್ಥಾಪಕಿ ಹಾಗೂ ಸಂಸದೆ ಮೇನಕಾ ಗಾಂಧಿ ಹೇಳಿದ್ದಾರೆ.
ದೇಶವು ಮಾನವನ ದುರಾಸೆ, ಕ್ರೌರ್ಯ, ನಿರ್ಲಕ್ಷ್ಯ, ಅಸಡ್ಡೆ, ಅಜ್ಞಾನ ಮತ್ತು ಅಸಹಿಷ್ಣುತೆಯ ವಿರುದ್ಧ ಹೋರಾಡಬೇಕಾಗಿದೆ. ನಮಗೆ ಪ್ರಾಣಿಗಳು ಬೇಕು. ಕಾನೂನುಗಳು ಸಹ ಪ್ರಾಣಿಗಳನ್ನು ರಕ್ಷಿಸುತ್ತವೆ ಎಂದು ಅವರು ಹೇಳಿದರು.
ಶ್ವಾನಗಳ ರಕ್ಷಣೆಗಾಗಿ ಸಂಘಟನೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದರು. ನಾಯಿಗಳು ಯಾವಾಗಲೂ ನಮ್ಮ ಮನೆ ಮತ್ತು ಹೃದಯದ ಭಾಗವಾಗಿದೆ. ಅದು ನಮಗೆ ಪ್ರೀತಿ ಮತ್ತು ನಿಷ್ಠೆಯನ್ನು ತೋರಿಸುತ್ತವೆ. ಅವರ ಮೇಲೆ ನೀವು ಹೇಗೆ ದ್ವೇಷ ಮತ್ತು ಕ್ರೌರ್ಯ ತೋರಿಸುತ್ತೀರಿ ಎಂದು ನಟಿ ಸೋನಂ ಕಪೂರ್ ಹೇಳಿದ್ದಾರೆ. ನಟಿ ದಿವ್ಯಾ ಸೇಠ್ ಕೂಡ ಸಂಸ್ಥೆಗೆ ಬೆಂಬಲ ನೀಡಲು ಮುಂದೆ ಬಂದಿದ್ದರು.




