ನವದೆಹಲಿ: ದೇಶದ ಹಿರಿಯ ನಾಗರಿಕರಲ್ಲಿ ಉಷ್ಣ ಸಂಬಂಧಿ ಸಾವಿನ ಸಂಖ್ಯೆ 2000-2004ರ ಅವಧಿಗೆ ಹೋಲಿಸಿದರೆ ಶೇ. 55ರಷ್ಟು ಹೆಚ್ಚಿದೆ ಎಂಬ ಆತಂಕಕಾರಿ ಅಂಶವನ್ನು ಲ್ಯಾನ್ಸೆಟ್ (Lancet) ವರದಿ ಬಹಿರಂಗಪಡಿಸಿದೆ.
2002-04ರ ಅವಧಿಯಲ್ಲಿ ವಾರ್ಷಿಕ 20 ಸಾವಿರ ಉಷ್ಣ ಸಂಬಂಧಿ ಸಾವು ಸಂಭವಿಸಿದ್ದರೆ, 2017-21ರ ಅವಧಿಯಲ್ಲಿ ವಾರ್ಷಿಕ 31 ಸಾವಿರ ವೃದ್ಧರು ಅಸುನೀಗಿದ್ದಾರೆ. ಅಂತೆಯೇ ಡೆಂಗ್ ಪ್ರಸರಣ ಅವಧಿ 1951-60ಕ್ಕೆ ಹೋಲಿಸಿದರೆ 2012-21ರ ಅವಧಿಯಲ್ಲಿ 5.6 ತಿಂಗಳಿಗೆ ಹೆಚ್ಚಿದೆ ಎಂದೂ ವರದಿ ವಿವರಿಸಿದೆ.
'ಲ್ಯಾನ್ಸೆಟ್ ಕೌಂಟ್‍ಡೌನ್ ರಿಪೋರ್ಟ್ ಆನ್ ದಿ ವರ್ಸನಿಂಗ್ ಗ್ಲೋಬಲ್ ಇಂಪ್ಯಾಕ್ಟ್ ಆಫ್ ಕ್ಲೈಮೇಟ್ ಕ್ರೈಸಿಸ್ ಆನ್ ಹ್ಯೂಮನ್ ಹೆಲ್ತ್' (Lancet Countdown report on the worsening global impacts of climate crisis on human health) ವರದಿಯಿಂದ ಈ ಅಂಶ ಬೆಳಕಿಗೆ ಬಂದಿದೆ.
2017-21ರ ಅವಧಿಯಲ್ಲಿ ಜಾಗತಿಕವಾಗಿ ಉಷ್ಣ ಸಂಬಂಧಿ ಸಾವಿನ ಸಂಖ್ಯೆ ಶೇಕಡ 68ರಷ್ಟು ಹೆಚ್ಚಿ ವಾರ್ಷಿಕ 3,10,00ಕ್ಕೇರಿದೆ. ಕೋವಿಡ್-19 ಸಾಂಕ್ರಾಮಿಕ ಕೂಡಾ ಈ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಲು ಕಾರಣ ಎಂದು ವರದಿ ವಿಶ್ಲೇಷಿಸಿದೆ.
ದಹಿಸುವ ಇಂಧನಕ್ಕೆ ಹಲವು ದೇಶಗಳಲ್ಲಿ ಸಬ್ಸಿಡಿ ನೀಡುವ ಸರ್ಕಾರಗಳ ಕ್ರಮಗಳು ಹೇಗೆ ಜಾಗತಿಕವಾಗಿ ಸಮಸ್ಯೆ ಸೃಷ್ಟಿಸುತ್ತಿವೆ ಎನ್ನುವುದನ್ನು ಕೂಡಾ ವರದಿ ವಿವರಿಸಿದೆ. ಇದು ವಾಯು ಗುಣಮಟ್ಟದ ಕುಸಿತಕ್ಕೆ ಕಾರಣವಾಗಿದ್ದು, ಆಹಾರ ಉತ್ಪಾದನೆ ಕುಂಠಿತಗೊಳ್ಳಲು ಮತ್ತು ಅಧಿಕ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಿಂದಾಗಿ ಸೋಂಕು ರೋಗಗಳು ಹರಡಲು ಕೂಡಾ ಕಾರಣವಾಗುತ್ತಿದೆ ಎಂದು ತಿಳಿಸಿದೆ. ಭಾರತದಲ್ಲಿ ಸುಮಾರು 3.30 ಲಕ್ಷ ಮಂದಿ 2020ರಲ್ಲಿ ದಹಿಸುವ ಇಂಧನದ ಮಾಲಿನ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದೂ ಹೇಳಿದೆ.
"ಹವಾಗುಣ ನಮ್ಮನ್ನು ಕೊಲ್ಲುತ್ತಿದೆ. ಇದು ನಮ್ಮ ಭೂಮಿಯ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರದೇ, ಮಾರಕ ವಾಯುಮಾಲಿನ್ಯ, ಕುಸಿಯುತ್ತಿರುವ ಆಹಾರ ಭದ್ರತೆ, ಸಾಂಕ್ರಾಮಿಕ ರೋಗ ಸಾಧ್ಯತೆ ಹೆಚ್ಚಳ, ದಾಖಲೆ ಅಧಿಕ ಉಷ್ಣಾಂಶ, ಬರಗಾಲ, ಪ್ರವಾಹ ಮತ್ತಿತರ ಘಟನೆಗಳ ಮೂಲಕ ಎಲ್ಲರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ ಎಂದು ವರದಿ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟ್ರೆಸ್ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.





