ನಾವು ಮಾಡುವ ಹಬ್ಬದ ಅಡುಗೆಗಳಲ್ಲಿ ಸಿಹಿತಿಂಡಿಗಳಿಗೆ ಬೆಲ್ಲವನ್ನು ಹಾಕಲಾಗುವುದು. ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಕ್ಕರೆ ಹಾಕಿ ಮಾಡಿರುವ ಸ್ವೀಟ್‌ಗಿಂತ ಬೆಲ್ಲ ಹಾಕಿ ಮಾಡಿರುವ ಸ್ವೀಟ್ ತಿಂದರೆ ಆರೋಗ್ಯಕರ.
100ಗ್ರಾಂ ಬೆಲ್ಲದಲ್ಲಿ 5 ಮಿಗ್ರಾಂ ಕಬ್ಬಿಣದಂಶ ದೊರೆಯುತ್ತದೆ. ಅಲ್ಲೆ ಬೆಲ್ಲದಿಂದ ಕ್ಯಾಲ್ಸಿಯಂ, ಪೊಟಾಷ್ಯಿಯಂ ಎಲ್ಲಾ ದೊರೆಯುತ್ತದೆ, ಆದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯೆಂದು ಮಧುಮೇಹಿಗಳು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಗಳನ್ನು ತಿನ್ನಬಹುದೇ, ಖಂಡಿತ ಇಲ್ಲ.
ಮಧುಮೇಹಿಗಳಿಗೆ ಬೆಲ್ಲ ಸಕ್ಕರೆ ಬದಲಿಗೆ ಪರ್ಯಾಯ ಅಲ್ಲ
ಮಧುಮೇಹಿಗಳಿಗೆ ಬೆಲ್ಲ ಸಕ್ಕರೆ ಬದಲಿಗೆ ಪರ್ಯಾಯ ಅಲ್ಲವೇ ಅಲ್ಲ. ಎರಡೂ ಕೂಡ ಮಧುಮೇಹಿಗಳ
ಆರೋಗ್ಯದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಸಕ್ಕರೆ ಬೇಗನೆ ದೇಹದ ರಕ್ತದಲ್ಲಿ
ಸಕ್ಕರೆಯಂಶ ಹೆಚ್ಚಿಸಿದರೆ ಬೆಲ್ಲ ಸ್ವಲ್ಪ ನಿಧಾನವಾಗಿ ದೇಹದಲ್ಲಿ ಸಕ್ಕರೆಯಂಶ
ಹೆಚ್ಚಿಸುತ್ತದೆ. ಆದ್ದರಿಂದ ಬೆಲ್ಲ ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ.
ಮಧುಮೇಹ ನಿಯಂತ್ರಣದಲ್ಲಿದ್ದರೆ ಸ್ವಲ್ಪ ಪ್ರಮಾಣದಲ್ಲಿ ಬೆಲ್ಲದ ಸಿಹಿತಿಂಡಿ
ಸವಿಯಬಹುದು
ಮಧುಮೇಹಿಗಳಲ್ಲಿ ಅನೇಕರು ರಕ್ತದಲ್ಲಿ ಸಕ್ಕರೆಯಂಶವನ್ನು
ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ರಕ್ತದಲ್ಲಿ ಮಧುಮೇಹ ನಿಯಂತ್ರಣದಲ್ಲಿದ್ದರೆ
ಸ್ವಲ್ಪ ಸಿಹಿ ತಿಂಡಿ ರುಚಿ ನೋಡಿದರೆ ಏನೂ ಅಪಾಯವಿಲ್ಲ. ಮಧುಮೇಹ ನಿಯಂತ್ರಣದಲ್ಲಿ
ಇಲ್ಲವೆಂದರೆ ಸಿಹಿಯನ್ನು ಮುಟ್ಟಲೇ ಬೇಡಿ. ಕಬ್ಬಿನ ಹಾಲು ಕೂಡ ಕುಡಿಯಬೇಡಿ.
ಆರೋಗ್ಯವಂತರು ಸಕ್ಕರೆ ಬದಲಿಗೆ ಬೆಲ್ಲ ಬಳಸಿದರೆ ಒಳ್ಳೆಯದೇ?
ನೀವು ಆರೋಗ್ಯವಂತರಾಗಿದ್ದರೆ ಆರೋಗ್ಯವನ್ನು ಕಾಪಾಡಲು ಸಕ್ಕರೆ ಬದಲಿಗೆ ಬೆಲ್ಲ ಬಳಸುವುದು
ಒಳ್ಳೆಯದು. ಬೆಲ್ಲದಲ್ಲಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶಗಳು, ಖನಿಜಾಂಗಳು
ದೊರೆಯುತ್ತದೆ. ಮಕ್ಕಳಿಗೆ ಸಿಹಿ ತಿಂಡಿ ಮಾಡುವಾಗ ಸಕ್ಕರೆ ಬದಲಿಗೆ ಬೆಲ್ಲ ಹಾಕಿ ಮಾಡಿ.
ಚಳಿಗಾಲದಲ್ಲಿ ಬೆಲ್ಲ, ಬೇಸಿಗೆಯಲ್ಲಿ ಸಕ್ಕರೆ ಒಳ್ಳೆಯದು
ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ರುಜುತಾ ದ್ವಿವೇಕರ್ ಹೇಳುವ ಪ್ರಕಾರ ಚಳಿಗಾಲದಲ್ಲಿ
ಬೆಲ್ಲ ಬಳಸುವುದು ಬೇಸಿಗೆಯಲ್ಲಿ ಸಕ್ಕರೆ ಬಳಸುವುದು ಒಳ್ಳೆಯದು.
ಬೆಲ್ಲ ಚಳಿಗಾಲದಲ್ಲಿ ಒಳ್ಳೆಯದು ಏಕೆ?
ಆಯುರ್ವೇದ ಪ್ರಕಾರ ಬೆಲ್ಲ ಚಯಪಚಯ ಕ್ರಿಯೆಯಲ್ಲಿ ಮೈಯಲ್ಲಿನ ಉಷ್ಣಾಂಶ ಹೆಚ್ಚಿಸುತ್ತೆ.
ಚಳಿಗಾಲದಲ್ಲಿ ಚಳಿಯಿಂದಾಗಿ ರಕ್ತ ನಾಳಗಳು ಮುದುಡಿಕೊಂಡಿರುತ್ತದೆ, ಬೆಲ್ಲ ತಿಂದಾಗ ಮೈ
ಬೆಚ್ಚಗಾಗಿ ರಕ್ತ ಸಂಚಾರ ಸರಿಯಾಗಿ ನಡೆಯುವುದು.





