HEALTH TIPS

ಅವರು ಅಸ್ಸಾಮಿನ 'ಸ್ಥಳೀಯರು'ಎಂದು ಅಧಿಕೃತವಾಗಿ ಘೋಷಣೆ, ಬಳಿಕ ಪೌರತ್ವ ಸಾಬೀತಿಗೆ ಸೂಚನೆ...!

                   ವದೆಹಲಿ:ಅವರನ್ನು ಅಸ್ಸಾಮಿನ 'ಸ್ಥಳೀಯರು'('natives') ಎಂದು ಘೋಷಿಸಲಾಗಿತ್ತು, ಆದರೆ ಈಗ ಸರಕಾರವು ತಮ್ಮ ಪೌರತ್ವವನ್ನು ಸಾಬೀತುಗೊಳಿಸುವಂತೆ ಅವರಿಗೆ ಸೂಚಿಸಿದೆ.

                  ಜನಿಸಿದಾಗಿನಿಂದಲೂ ಅಸ್ಸಾಮಿನಲ್ಲಿಯೇ ವಾಸವಾಗಿರುವ 'ದೇಶಿ ಮುಸ್ಲಿಂ'ಸಮುದಾಯಕ್ಕೆ ಸೇರಿದ ಅವರೆಲ್ಲ ಈಗ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಗೊಳಿಸಲು ಪರದಾಡುತ್ತಿದ್ದಾರೆ.

                  ಅಸ್ಸಾಮಿನ ಧುಬ್ರಿ(Dhubri) ಜಿಲ್ಲೆಯ ರಾಮ್ರೈಕುತಿ ಗ್ರಾಮದಲ್ಲಿ ದೇಶಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸದರ್ ಅಲಿ (Sadr Ali)(60) ಅವರ 12 ಸದಸ್ಯರ ಅವಿಭಕ್ತ ಕುಟುಂಬ ವಾಸವಾಗಿದೆ. ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿರುವ ಈ ಗ್ರಾಮ ಅಸ್ಸಾಂ - ಪ.ಬಂಗಾಳ ಅಂತರರಾಜ್ಯ ಗಡಿಯಿಂದ ಕೇವಲ 100 ಮೀ. ದೂರದಲ್ಲಿದೆ.

                   ಅಲಿ ಮತ್ತು ಅವರ ಹಿರಿಯ ಸೋದರ ಮುಜಾಮ್ ಶೇಕ್ (Muzam Shaikh)ಬೇರೆಯವರ ಹೊಲದಲ್ಲಿ ಒಕ್ಕಲು ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಅಥವಾ ಕೊಯ್ಲಿನ ಸಮಯವಲ್ಲದಿದ್ದಾಗ ದಿನಗೂಲಿ ಕಾರ್ಮಿಕರಾಗಿ ಕೆಲಸ ಹುಡುಕುವ ಪ್ರಯತ್ನ ಮಾಡುತ್ತಿರುತ್ತಾರೆ. ಜು.30ರಂದು ಅಲಿಯವರ ಮನೆಗೆ ಭೇಟಿ ನೀಡಿದ್ದ ಮಫ್ತಿಯಲ್ಲಿದ್ದ ಸ್ಥಳೀಯ ಅಗೊಮನಿ ಪೊಲೀಸ್ ಠಾಣೆ(Agomani Police Station)ಯ ಇಬ್ಬರು ಸಿಬ್ಬಂದಿಗಳು, ಅಲಿ ಕುಟುಂಬದ ನಾಲ್ವರು ಶಂಕಿತ ವಿದೇಶಿಯರಾಗಿದ್ದು, ಅವರ ಮೇಲೆ ನಿಗಾಯಿರಿಸಲಾಗಿದೆ ಎಂದು ತಿಳಿಸಿದ್ದರು. ಅಲಿ, ಅವರ ಪತ್ನಿ ಮೊಲಿನಾ ಬೀಬಿ(Molina Bibi) (51), ಶೇಕ್ ಮತ್ತು ಅವರ ಪತ್ನಿ ಸಲೀಹಾ ಬೀಬಿ (55) ಅವರಿಗೆ ನೋಟಿಸ್ ಗಳನ್ನೂ ನೀಡಿದ್ದರು.

                  ತಮ್ಮ ಪೌರತ್ವವನ್ನು ಸಾಬೀತುಗೊಳಿಸಲು ಅವರೆಲ್ಲ ಧುಬ್ರಿ ಪಟ್ಟಣದಲ್ಲಿಯ ವಿದೇಶಿಯರ ನ್ಯಾಯಾಧಿಕರಣಕ್ಕೆ ಹೋಗಬೇಕಿತ್ತು. ಬಿಕ್ಕುತ್ತಲೇ ಸುದ್ದಿಗಾರರ ಬಳಿ ಅಳಲು ತೋಡಿಕೊಂಡ ಅಲಿ, 'ಇದು ನಾಚಿಕೆಗೇಡಿನ ವಿಷಯವಾಗಿದೆ. ನಾವು ಭಾರತೀಯರಾಗಿದ್ದೇವೆ ಮತ್ತು ಆ ಕುರಿತು ಯಾವುದೇ ಪ್ರಶ್ನೆಯಿಲ್ಲ. ನನ್ನ ತಂದೆ 1947ರಿಂದ ಶಾಲಾ ಪ್ರಮಾಣಪತ್ರವನ್ನು ಹೊಂದಿದ್ದಾರೆ,1950ರ ದಶಕದಲ್ಲಿ ಅವರು ಕೆಲಸದಲ್ಲಿದ್ದರು. 1951ರ ಎನ್‌ಆರ್ಸಿಯಲ್ಲಿ ಅವರ ಹೆಸರಿತ್ತು ಮತ್ತು 1958ರ ಚುನಾವಣೆಯಲ್ಲಿ ಮತವನ್ನೂ ಚಲಾಯಿಸಿದ್ದರು ' ಎಂದರು. ಎನ್‌ಆರ್ಸಿ ಅಸ್ಸಾಮಿನಲ್ಲಿ ವಾಸವಾಗಿರುವ ಭಾರತೀಯರ ಪಟ್ಟಿಯಾಗಿದೆ. 1951ರಲ್ಲಿ ಮೊದಲ ಬಾರಿಗೆ ಅದನ್ನು ಸಿದ್ಧಪಡಿಸಲಾಗಿತ್ತು ಮತ್ತು 2019ರಲ್ಲಿ ಪರಿಷ್ಕರಿಸಲಾಗಿತ್ತು.

             'ನಾವು ಹುಟ್ಟಿದಾಗಿನಿಂದಲೂ ಇಲ್ಲಿಯೇ ವಾಸವಾಗಿದ್ದೇವೆ. ನನ್ನ ತಂದೆ ಸರಕಾರಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು ಮತ್ತು ಮಾಸಿಕ 7-10 ರೂ.ಸಂಬಳ ಪಡೆಯುತ್ತಿದ್ದರು. ಈಗ ಅವರ ಪುತ್ರರಿಗೆ ತಮ್ಮ ರಾಷ್ಟ್ರೀಯತೆಯನ್ನು ಸಾಬೀತು ಮಾಡುವಂತೆ ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ. ನಮ್ಮ ಬಳಿ ಹಣವಿಲ್ಲ, ಸರಕಾರವು ಯಾವುದೇ ರೀತಿಯಲ್ಲಿ ನಮಗೆ ನೆರವಾಗುತ್ತಿಲ್ಲ. ಬದಲಿಗೆ ನಮ್ಮ ರಾಷ್ಟ್ರೀಯತೆಯನ್ನು ಸಾಬೀತುಗೊಳಿಸುವಂತೆ ನಮಗೆ ತಾಕೀತು ಮಾಡುವ ಮೂಲಕ ನಮ್ಮನ್ನು ಸಂಕಷ್ಟಕ್ಕೆ ತಳ್ಳುತ್ತಿದೆ 'ಎಂದರು.

                ಸಂಕಷ್ಟದಲ್ಲಿ ಸಿಲುಕಿರುವುದು ಒಬ್ಬ ಅಲಿಯ ಕುಟುಂಬವಲ್ಲ, ಹಲವಾರು ಕುಟುಂಬಗಳು ತಮ್ಮ ಪೌರತ್ವ ಸಾಬೀತು ಮಾಡಲು ಪರದಾಡುತ್ತಿವೆ. ಅಗೊಮನಿ ಪೊಲೀಸ್ ಠಾಣೆಯ ಗಡಿ ಪೊಲೀಸ್ ಅಧಿಕಾರಿ ತಿಳಿಸಿರುವಂತೆ ಅವರ ವ್ಯಾಪ್ತಿಯಲ್ಲಿನ ಕನಿಷ್ಠ 150 ಕುಟುಂಬಗಳಿಗೆ ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ.

                 ಹೆಚ್ಚಿನ ಕುಟುಂಬಗಳು ದೇಶಿ ಮುಸ್ಲಿಂ ಸಮುದಾಯಕ್ಕೆ ಸೇರಿವೆ. ಲೋವರ್ ಅಸ್ಸಾಮಿನ ಸ್ಥಳೀಯರು ಎಂದು ಪರಿಗಣಿಸಲಾಗಿರುವ ಅವರ ಬೇರುಗಳು ಕಾಮರೂಪ ಸಂಸ್ಥಾನದಲ್ಲಿ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳಲ್ಲಿವೆ. ಅವರು 13ನೇ ಶತಮಾನದ ಸುಮಾರಿಗೆ ಇಸ್ಲಾಮಿಗೆ ಮತಾಂತರಗೊಂಡಿದ್ದರು ಎನ್ನಲಾಗಿದೆ.

               ಅಸ್ಸಾಂ ಗಡಿ ಪೊಲೀಸ್ ಅಧಿಕಾರಿಗಳ ಪ್ರಕಾರ ಈ ನೋಟಿಸ್ ಗಳ ಪೈಕಿ ಹೆಚ್ಚಿನವು ಎರಡು ದಶಕಗಳಿಗೂ ಹಿಂದಿನ ಹಳೆಯ ಪ್ರಕರಣಗಳಿಗೆ ಸಂಬಂಧಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries