ಮುಳ್ಳೇರಿಯ: ಅಜಾನೂರು ಗ್ರಾಮ ಪಂಚಾಯಿತಿಯ ಕೋತ್ತಿಕಲ್ ಮತ್ತು ಪೊಯ್ಯಕರ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಸದಾ ಸುಂದರ ತಾಣವಾಗಿ ಗುರುತಿಸಿಕೊಂಡಿದೆ. ಚಿತ್ತಾರಿ ನದಿ ಅರಬ್ಬೀ ಸಮುದ್ರವನ್ನು ಸಂಧಿಸುವ ಕೇಂದ್ರ ಕೋತ್ತಿಕಲ್ ಪ್ರದೇಶವಾಗಿದೆ. ಇಲ್ಲಿರುವ ಪುಟ್ಟ ತೋಪುಗಳು ಅತ್ಯಂತ ಸುಂದರವಾಗಿದ್ದು, ಜೀವವೈವಿಧ್ಯದಿಂದ ಸಮೃದ್ಧವಾಗಿವೆ. 50 ಕೋಟಿ ಬಂಡವಾಳದಲ್ಲಿ 32 ಎಕರೆ ಜಾಗದಲ್ಲಿ ಪೆÇಯ್ಯಕರ ಮತ್ತು ಕೋತ್ತಿಕಲ್ ಪ್ರದೇಶದಲ್ಲಿ ಬೇಕಲ ಪ್ರವಾಸೋದ್ಯಮ ಗ್ರಾಮ ಬರುವುದರೊಂದಿಗೆ ಅಜಾನೂರು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಸ್ಥಾನ ಪಡೆಯಲಿದೆ.
ಬೇಕಲ ಪ್ರವಾಸೋದ್ಯಮ ಗ್ರಾಮದ ಭಾಗವಾಗಿ ನದಿ ಬದಿಯ ಉದ್ಯಾನವನ, ಪೆಡಲ್ ಬೋಟ್, ಗುಡಿಸಲು, ಲೈವ್ ಫಿಶ್ ಕ್ಯಾಚಿಂಗ್ ಸೆಂಟರ್, ಸ್ಥಳೀಯ ಆಹಾರ ಮಳಿಗೆಗಳು ಮತ್ತು ಸಣ್ಣ ವಿಲ್ಲಾಗಳಂತಹ ಅನೇಕ ಯೋಜನೆಗಳನ್ನು ಕಲ್ಪಿಸಲು ಲಕ್ಷ್ಯವಿರಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ಪಿ.ಎ.ಮಹಮ್ಮದ್ ರಿಯಾಝ್ ಅವರು ಈ ಯೋಜನೆಯನ್ನು ಘೋಷಿಸಿದ್ದರು.
1996ರಲ್ಲಿ ಬಿಆರ್‍ಡಿಸಿ(ಬೇಕಲ್ ರಿಸೋರ್ಟ್ ಡೆವೆಲಪ್ಮೆಂಟ್ ಕಾರ್ಪೋರೇಶನ್) ಯು ಚಿತ್ತಾರಿ ಗ್ರಾಮದ ಪೊಯ್ಯಕರದಲ್ಲಿ 31.5 ಎಕರೆ ಮತ್ತು ಅಜಾನೂರು ಗ್ರಾಮದ ಕೊತ್ತಿಕಲ್‍ನಲ್ಲಿ 1.5 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಂದ ರೆಸಾರ್ಟ್‍ಗಳನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಂಡಿತ್ತು. ಬಿಆರ್‍ಡಿಸಿ ಮೊದಲು ರೆಸಾರ್ಟ್ ನಿರ್ಮಾಣಕ್ಕಾಗಿ ಒಂದು ನಿರ್ಮಾಣ ತಂಡಕ್ಕೆ ಭೂಮಿಯನ್ನು ಗುತ್ತಿಗೆ ನೀಡಿತ್ತು. ಬಳಿಕ, ನಿರ್ಮಾಣ ತಂಡ ತಮ್ಮ ಪ್ರಯತ್ನವನ್ನು ಕೈಬಿಟ್ಟಾಗ, ರೆಸಾರ್ಟ್ ನಿರ್ಮಾಣಕ್ಕಾಗಿ ಭೂಮಿಯನ್ನು ತ್ರಿಶೂರ್‍ನಲ್ಲಿ ಮತ್ತೊಂದು ನಿರ್ಮಾಣ ತಂಡಕ್ಕೆ ಹಸ್ತಾಂತರಿಸಲಾಯಿತು. ಆದರೆ ಕೋಸ್ಟ್ ಗಾರ್ಡ್ ಕಾನೂನು ಬಿಗಿಗೊಳಿಸಿದ್ದರಿಂದ ಅಲ್ಲಿ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತು. ಕಾನೂನಿನ ಪ್ರಕಾರ ಕನಿಷ್ಠ 5 ಎಕರೆ ಜಾಗದಲ್ಲಿ ಮಾತ್ರ ನಿರ್ಮಾಣ ಕಾಮಗಾರಿ ನಡೆಸಬಹುದು. ಇದರೊಂದಿಗೆ, ಈ ನಿರ್ಮಾಣ ತಂಡ ಕೂಡ ಯೋಜನೆಯನ್ನು ಕೈಬಿಟ್ಟಿತು.
ರೆಸಾರ್ಟ್ ನಿರ್ಮಾಣಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ, ಯೋಜನೆ ನೆನೆಗುದಿಗೆ ಬಿದ್ದು ಈ ಸ್ಥಳವು ವರ್ಷಗಳಿಂದ ಕಾಡಿನಿಂದ ಆವೃತವಾಗಿತ್ತು. ನಂತರ ಈ ಭಾಗದಲ್ಲಿ ಪ್ರವಾಸೋದ್ಯಮ ಯೋಜನೆ ಆರಂಭಿಸಲು ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ನಿರಂತರ ಮಧ್ಯಸ್ಥಿಕೆ ವಹಿಸಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ, ಉಪಾಧ್ಯಕ್ಷ ಕೆ.ಸಬೀಶ್ ನೇತೃತ್ವದಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಪ್ರವಾಸೋದ್ಯಮ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸಚಿವರು ಹಾಗೂ ಬಿಆರ್ ಡಿಸಿ ಎಂಡಿ ಅವರಿಗೆ ನಿರಂತರ ಮನವಿ ಸಲ್ಲಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಮಧ್ಯ ಪ್ರವೇಶಿಸಿ ಇಲಾಖಾ ಪರಿಶೀಲನೆಗೆ ಆದೇಶಿಸಿದರು. ರೆಸಾರ್ಟ್ ರಹಿತ ಯೋಜನೆಗಳಿಗೆ ನಿವೇಶನ ಅನುಕೂಲಕರವಾಗಿದೆ ಎಂದು ಸ್ಥಳ ಪರಿಶೀಲನೆ ನಡೆಸಿದ ತಂಡ ಇದೀಗ ವರದಿ ನೀಡಿರುವುದರೊಂದಿಗೆ ಯೋಜನೆ ಮತ್ತೆ ಜೀವಕಳೆ ಪಡೆಯುವ ಹಂತದಲ್ಲಿದೆ.
ಬೇಕಲ ಪ್ರವಾಸೋದ್ಯಮ ವಿಲೇಜ್ ಮೂಲಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಅಜಾನೂರು ಮತ್ತೆ ಜೀವಕಳೆಯತ್ತ
0
ಅಕ್ಟೋಬರ್ 15, 2022
Tags




