ಬೀಜಿಂಗ್ : ಚೀನಾದ ಕಮ್ಯುನಿಸ್ಟ್ ಪಕ್ಷದ ರಾಜಕೀಯದಲ್ಲಿ ಉನ್ನತ ಸ್ಥಾನಗಳಲ್ಲಿ ಲಿಂಗ ಅಸಮಾನತೆ ಗಮನಾರ್ಹವಾಗಿ ಎದ್ದು ಕಾಣಿಸುತ್ತಿದೆ. ಶತಮಾನದ ಕಾಲು ಭಾಗದಿಂದೀಚೆಗೆ ಇದೇ ಮೊದಲ ಬಾರಿಗೆ 24 ಸದಸ್ಯರ ಪಾಲಿಟ್‌ಬ್ಯೂರೊದಲ್ಲಿ ಮಹಿಳೆಗೆ ಸ್ಥಾನವಿಲ್ಲದಂತಾಗಿದೆ.
ಇಡೀ ಪಾಲಿಟ್‌ಬ್ಯೂರೊ ಈಗ ಪುರುಷರ ಸಂಘವಾಗಿದೆ.
ವಾರಾಂತ್ಯದಲ್ಲಿ ರಾಷ್ಟ್ರದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಷಿ ಜಿನ್‌ಪಿಂಗ್ ಮತ್ತು ಅವರ ಮಿತ್ರರು ಅಧಿಕಾರದತ್ತ ಗಮನ ಕೇಂದ್ರೀಕರಿಸಿದ್ದರು. ಇದರ ನಡುವೆ ಪಕ್ಷದ ಉನ್ನತ ನಾಯಕಿಯೊಬ್ಬರು ನಿವೃತ್ತರಾಗಿದ್ದಾರೆ. ಚೀನಾದ ಆರೋಗ್ಯ ನೀತಿಗಳ ಮೇಲ್ವಿಚಾರಣೆಯ ಉಪಾಧ್ಯಕ್ಷರಾಗಿದ್ದ, ಅನುಭವಿ ರಾಜಕಾರಣಿ ಸನ್ ಚುನ್‌ಲಾನ್ ಅವರಿಗೆ ಶನಿವಾರ ಪ್ರಕಟವಾದ ಕೇಂದ್ರ ಸಮಿತಿ ಪಟ್ಟಿಯಲ್ಲಿ ಸ್ಥಾನವಿರಲಿಲ್ಲ. ಅಂದರೆ, ಅವರು ಹುದ್ದೆಯಿಂದ ನಿರ್ಗಮಿಸಿದ್ದರು.
72 ವರ್ಷದ ಸನ್ ಅವರು ಪಕ್ಷದ ಕಾರ್ಯಕಾರಿ ನಿರ್ಧಾರ ಕೈಗೊಳ್ಳುವ ನಿರ್ಣಾಯಕ ಸಂಸ್ಥೆಯೆನಿಸಿದ ಪಾಲಿಟ್ ಬ್ಯುರೊದಲ್ಲಿ ಇದ್ದ ಏಕೈಕ ಮಹಿಳಾ ರಾಜಕಾರಣಿ. ಕೋವಿಡ್-19 ಲಾಕ್‌ಡೌನ್ ಹೇರಿಕೆ, ಕೋವಿಡ್ -19 ಕಠಿಣ ಮಾರ್ಗಸೂಚಿಗಳ ಅನುಷ್ಠಾನದಲ್ಲಿ ಅನುಸರಿಸಿದ ಕಟ್ಟುನಿಟ್ಟಿನ ಕ್ರಮದಿಂದಾಗಿ ಸನ್ ಚುನ್‌ಲಾನ್ ಅವರು ದೇಶದಲ್ಲಿ 'ಐರನ್ ಲೇಡಿ'ಯೆಂದೇ ಗುರುತಿಸಿಕೊಂಡಿದ್ದರು.
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದಲ್ಲಿ 96 ದಶಲಕ್ಷ ಸಕ್ರಿಯ ಸದಸ್ಯರು ಇದ್ದಾರೆ. ಆದರೆ, ಮಹಿಳೆಯರಿಗೆ ಯಾವತ್ತೂ ಹೆಚ್ಚಿನ ಅಧಿಕಾರ ಸಿಕ್ಕಿಲ್ಲ. ಈಗ ಅದು ಮತ್ತೂ ಕಡಿಮೆಯಾಗಿದೆ. ಪಕ್ಷದ ಹೊಸ 205 ಸದಸ್ಯರ ಕೇಂದ್ರ ಸಮಿತಿಯಲ್ಲಿ ಕೇವಲ ಶೇ 5ರಷ್ಟು ಮಾತ್ರ ಮಹಿಳೆಯರು ಇದ್ದಾರೆ. ಏಳು ಸದಸ್ಯರ ಸ್ಥಾಯಿ ಸಮಿತಿಯಲ್ಲಿ ಕೂಡ ಷಿ ಜಿನ್‌ಪಿಂಗ್ ಅವರ ನಿಷ್ಠಾವಂತ ಪುರುಷರೇ ತುಂಬಿಕೊಂಡಿದ್ದಾರೆ.





