ಬದಿಯಡ್ಕ: ಎಡನೀರು ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮಹಾಸಭೆ ಎಡನೀರು ಶ್ರೀ ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಶ್ರೀಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜರಗಿತು.
ನವೀನ ಕುಮಾರ ಭಟ್ ಕುಂಜರಕಾನ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ನಿರ್ಮಾಣದ ಮುಂದಿನ ಹಂತದ ವಿವರಗಳನ್ನು ತಿಳಿಸಿದರು. ಧಾರ್ಮಿಕ ಮುಮದಾಳು ವಸಂತ ಪೈ ಬದಿಯಡ್ಕ ದೇವಸ್ಥಾನ ನಿರ್ಮಾಣದ ಮಹತ್ವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳಿದರು. ಹೂವಿನ ಎಸಳನ್ನು ನಾವು ಭಗವಂತನಿಗೆ ಅರ್ಪಿಸಿದಾಗ ಆತ ನಮಗೆ ಹೂವಿನ ರಾಶಿಯನ್ನೇ ಅನುಗ್ರಹಿಸುತ್ತಾನೆ. ದೇವರ ಸಾನ್ನಿಧ್ಯ ವೃದ್ಧಿಯೊಂದಿಗೆ ಊರಿಗೆ ಊರೇ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆ. ನಮ್ಮ ಪಾಲಿಗೆ ಒದಗಿಬಂದ ಈ ಪುಣ್ಯಕಾರ್ಯದಲ್ಲಿ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸಬೇಕು ಎಂದರು.
ಕೆ.ವಿ.ಬಾಲಕೃಷ್ಣ ಆಚಾರಿ, ಅಂಬಾಡಿ ಪಾಟಾಳಿ ಕಳೇರಿ, ವಾಸುದೇವ ಭಟ್ ಚೂರಿಮೂಲೆ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿವಿಧ ಪ್ರಾದೇಶಿಕ ಸಮಿತಿ, ಮಹಿಳಾ ಸಮಿತಿ, ಯುವಜನ ಸಮಿತಿಗಳನ್ನು ರೂಪೀಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಜ್ಞಾಪನ ಪತ್ರದ ಮುದ್ರಣದ ಕುರಿತು ಚರ್ಚಿಸಲಾಯಿತು. ಕೆ.ಯಂ ಶರ್ಮ ಎಡನೀರು ಸ್ವಾಗತಿಸಿ, ನಿರೂಪಣೆಗೈದರು. ಈಶ್ವರ ಭಟ್ ಸಮಿತಿಯ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಪ್ರಶಾಂತ ಕಲ್ಲುಗದ್ದೆ, ರಾಜನ್ ಮುಳಿಯಾರು ವಿಜ್ಞಾಪನೆ ಪತ್ರದ ಕುರಿತು ಮಾಹಿತಿ, ವಿವರಣೆ ನೀಡಿದರು. ಜಗನ್ನಾಥ ಕೆ ವಂದಿಸಿದರು.



