ದೇಶದ ಶೇ 34 ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯವಿದ್ದು ಶೇ 50 ರಷ್ಟು ಹೆಚ್ಚಿನ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಿಕ್ಷಣ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದ ಅಂಕಿಅಂಶಗಳಿಂದ ತಿಳಿದು ಬಂದಿದೆ ಎಂದು theprint.in ವರದಿ ಮಾಡಿದೆ.
ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಂ ಫಾರ್ ಎಜುಕೇಶನ್ 2021-22 ಅಂಕಿಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟು 14,89,115 ಶಾಲೆಗಳ ಪೈಕಿ 5,04,989 ಅಥವಾ ಶೇ 33.9 ರಷ್ಟು ಶಾಲೆಗಳಿಗೆ ಅಂತರ್ಜಾಲ ಸೌಲಭ್ಯವಿದೆ. ಈ ಶಾಲೆಗಳ ಪೈಕಿ ಶೇ. 24.2 ರಷ್ಟು ಶಾಲೆಗಳು ಸರ್ಕಾರಿ ಶಾಲೆಗಳಾಗಿದ್ದರೆ, ಶೇ 53.1 ಶಾಲೆಗಳು ಅನುದಾನಿತ ಹಾಗೂ ಶೇ 59.6 ರಷ್ಟು ಶಾಲೆಗಳು ಖಾಸಗಿ ಶಾಲೆಗಳಾಗಿವೆ.
ದೇಶದ ಒಟ್ಟು ಶಾಲೆಗಳ ಪೈಕಿ ಶೇ 45.8 ಶಾಲೆಗಳಲ್ಲಿ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿವೆ. ಈ ಶಾಲೆಗಳ ಪೈಕಿ ಶೇ 35.8 ಶಾಲೆಗಳು ಸರ್ಕಾರಿ ಶಾಲೆಗಳಾಗಿವೆ.
ಆದರೆ 2018-19 ರಿಂದೀಚೆಗೆ ಅಂತರ್ಜಾಲ ಸೌಲಭ್ಯಗಳು ಹಾಗೂ ಕಾರ್ಯನಿರತ ಕಂಪ್ಯೂಟರ್‌ಗಳಿರುವ ಶಾಲೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಅಂತರ್ಜಾಲ ಸೌಲಭ್ಯ ಇರುವ ಶಾಲೆಗಳು 2018-19 ರಲ್ಲಿ ಶೇ 18.73 ಆಗಿದ್ದರೆ 2021-22 ರಲ್ಲಿ ಈ ಸಂಖ್ಯೆ 33.9 ಶೇ ಗೆ ಏರಿಕೆಯಾಗಿದೆ.
ದಿಲ್ಲಿ ಮತ್ತು ಲಕ್ಷದ್ವೀಪದ ಶೇ. 100 ರಷ್ಟು ಶಾಲೆಗಳಲ್ಲಿ ಕಾರ್ಯನಿರತ ಕಂಪ್ಯೂಟರ್‌ಗಳಿವೆ. ಪಂಜಾಬ್ ಮತ್ತು ಚಂಡೀಗಢದ ಶೇ 99 ರಷ್ಟು ಶಾಲೆಗಳಲ್ಲಿ ಈ ಸವಲತ್ತು ಇದೆ. ಅಂತರ್ಜಾಲ ಸೌಲಭ್ಯ ಇರುವ ಶಾಲೆಗಳ ಪೈಕಿ ದಿಲ್ಲಿ ಆಗ್ರ ಸ್ಥಾನದಲ್ಲಿದ್ದು ಇಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸೌಲಭ್ಯವಿದೆ. ಚಂಡೀಗಢ ಮತ್ತು ಪುದುಚ್ಚೇರಿಯ ಶೇ 98 ರಷ್ಟು ಶಾಲೆಗಳಿಗೆ ಅಂತರ್ಜಾಲ ಸೌಲಭ್ಯವಿದೆ.


