ಕಾಸರಗೋಡು: ಹೊಸದುರ್ಗ ಮಾಕೋತ್ ಶ್ರೀ ಮಹಾವಿಷ್ಣು ದೇವಸ್ಥಾನದ ಬಾಗಿಲು ಒಡೆದು ನುಗ್ಗಿದ ಕಳ್ಳನೊಬ್ಬ ನಾಲ್ಕು ಕಾಣಿಕೆ ಹುಂಡಿಗಳನ್ನು ದೋಚಿದ್ದಾನೆ. ನಸುಕಿನ 2.20ರಿಂದ 3.30ರ ಮಧ್ಯೆ ಈ ಕಳವು ನಡೆದಿದೆ. ವಿಪರ್ಯಾಸವೆಂದರೆ ಇದೇ ಸಮಯಕ್ಕೆ ಗಸ್ತಿನಲ್ಲಿದ್ದ ಪೊಲೀಸರು, ದೇವಸ್ಥಾನ ಹೊರಾಂಗಣದಲ್ಲಿರಿಸಿದ್ದ ಪುಸ್ತಕದಲ್ಲಿ ಸಹಿ ಹಾಕಿ ತೆರಳಿದ್ದಾರೆ!
ದೇವಸ್ಥಾನದ ಸಿ.ಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಈ ಮಾಹಿತಿ ಲಭಿಸಿದೆ. ದೇವಸ್ಥಾನದ ಕಾಣಿಕೆ ಹುಂಡಿಯಿಂದ ಪ್ರತಿವಾರ ಹಣ ತೆಗೆಯಲಾಗುತ್ತಿದ್ದು, ಈ ಸಂದರ್ಭ ತಲಾ 10ಸಾವಿರ ರೂ. ಸಂಗ್ರಹಗೊಳ್ಳುತ್ತಿತ್ತು ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಮಾರು 40ಸಾವಿರ ರೂ. ಕಳವಾಗಿರಬೇಕೆಂದು ಸಂಶಯಿಸಲಾಗಿದೆ.
ದೇವಸ್ಥಾನದ ಅರ್ಚಕರು ಬೆಳಗ್ಗೆ ಪೂಜೆಗೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂಭಾಗದ ಬಾಗಿಲು ಒಡೆದು ನುಗ್ಗಿ ಕೃತ್ಯವೆಸಗಲಾಗಿದೆ. ಹೊಸದುರ್ಗ ಠಾಣೆ ಪೊಲೀಸರು, ಬೆರಳಚ್ಚು ಹಾಗೂ ಶ್ವಾನ ದಳ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿತು. ಶ್ವಾನ ಸನಿಹದ ಶ್ರೀ ಭಗವತೀ ದೇವಸ್ಥಾನದ ವರೆಗೂ ಸಂಚರಿಸಿ ನಿಂತುಕೊಂಡಿತ್ತು.
ಮಾಕೋತ್ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಎಂಟು ವರ್ಷದ ಹಿಂದೆಯೂ ಕಳವು ನಡೆದಿದ್ದು, ಅಂದು ಶ್ರೀದೇವರ ವಿಗ್ರಹಕ್ಕೆ ತೊಡಿಸಿದ್ದ ಚಿನ್ನದ ಸರ ಮತ್ತು ಕಾಣಿಕೆ ಹುಂಡಿ ಕಳವಾಗಿತ್ತು. ಅಂದು ಕಳವು ನಡೆಸಿದವರನ್ನೂ ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ.
ಹೊರಗೆ ಪೊಲೀಸ್ ಪೆಟ್ರೋಲಿಂಗ್, ಒಳಗೆ ದೇಗುಲದ ಕಾಣಿಕೆ ಹುಂಡಿ ಕಳವು!
0
ನವೆಂಬರ್ 21, 2022
Tags





