ಕಾಸರಗೋಡು: ಖಾಸಗಿ ವಲಯದಲ್ಲಿ ವಿದ್ಯಾವಂತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ರಾಷ್ಟ್ರೀಯ ಉದ್ಯೋಗ ಸೇವಾ ಇಲಾಖೆ ಆಯೋಜಿಸಿದ್ದ ನಿಯುಕ್ತಿ 2022 ಮೆಗಾ ಉದ್ಯೋಗ ಮೇಳದಲ್ಲಿ 197 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ. 415 ಅಭ್ಯರ್ಥಿಗಳನ್ನು ಶಾರ್ಟ್‍ಲಿಸ್ಟ್ ಮಾಡಲಾಗಿದೆ.
ಪೆರಿಯ ಶ್ರೀ ನಾರಾಯಣ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನಲ್ಲಿ ಆಯೋಜಿಸಿದ್ದ ಮೆಗಾ ಉದ್ಯೋಗ ಮೇಳವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಉದ್ಯೋಗ ಮೇಳಗಳು ಹೊಸ ತಲೆಮಾರುಗಳ ಆಶಯದಂತೆ ಆಗಬೇಕಾಗಿದ್ದು, ರಾಜ್ಯದ ಯುವಕ-ಯುವತಿಯರು ಕೆಲಸ-ವಿದ್ಯೆಗಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕೇರಳ ರಾಜ್ಯ ಯುವ ಸಮೂಹದಿಂದ ವಂಚಿತಗೊಂಡು ವೃದ್ದಾಶ್ರಮವಾಗಲಿದೆ ಎಂದು ಸಂಸದರು ಕಳವಳ ವ್ಯಕ್ತಪಡಿಸಿದರು. ಕೇರಳದ ಅತ್ಯುತ್ತಮ ಸಂತತಿ ವಿಶ್ವದ ಎಲ್ಲೇ ಇದ್ದರೂ ಅತ್ಯುತ್ತಮ ಕೌಶಲ ಪ್ರದರ್ಶಿಸುತ್ತಿದ್ದು, ಅವರನ್ನು ರಾಜ್ಯದಲ್ಲೇ ಉಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.
ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು.
ಈ ವರ್ಷ ಕೇಂದ್ರದ ಹಣವನ್ನು ಬಳಸಿಕೊಂಡು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಮೆಗಾ ಮೇಳವನ್ನು ಆಯೋಜಿಸಲಾಗಿದೆ. ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲು ಪ್ರತಿ ಜಿಲ್ಲೆಗೆ ಎರಡು ಲಕ್ಷ ರೂ.ನೀಡಲಾಗಿದೆ. ಇದರೊಂದಿಗೆ ಮಿನಿ ಉದ್ಯೋಗ ಮೇಳಗಳನ್ನೂ ಆಯೋಜಿಸಲಾಗುವುದು. ಐಟಿ, ಹಾಸ್ಪಿಟಾಲಿಟಿ, ಹೆಲ್ತ್‍ಕೇರ್, ಟೆಕ್ನಿಕಲ್ ಮ್ಯಾನೇಜ್‍ಮೆಂಟ್, ಸೇಲ್ಸ್ ಮತ್ತು ಮಾರ್ಕೆಟಿಂಗ್, ಆಫೀಸ್ ಅಡ್ಮಿನಿಸ್ಟ್ರೇಷನ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 3000 ಹುದ್ದೆಗಳು ವರದಿಯಾಗಿವೆ. 59 ಕಂಪನಿಗಳು ಸಂದರ್ಶನಕ್ಕೆ ಬಂದಿದ್ದವು. 712 ಅಭ್ಯರ್ಥಿಗಳು ಮತ್ತು 50 ಅಭ್ಯರ್ಥಿಗಳು ಭಾಗವಹಿಸಿದ್ದರು. ಎಂಬಿಎ, ಪದವಿ, ಸ್ನಾತಕೋತ್ತರ ಪದವಿ, ಪ್ಲಸ್ ಟು ಹಾಗೂ 10ನೇ ತರಗತಿ ಸೇರಿದಂತೆ 50 ವರ್ಷದೊಳಗಿನ ವಿವಿಧ ರೀತಿಯ ವಿದ್ಯಾರ್ಹತೆ ಹೊಂದಿರುವವರಿಗೆ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಫಾತಿಮಾ ಶಮ್ನಾ, ಕಾಞಂಗಾಡು ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ಕೆ.ಬಾಬುರಾಜನ್, ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಸದಸ್ಯೆ ವಿ.ವಿ.ಸುಮಾ, ಶ್ರೀನಾರಾಯಣ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜನ್ ಪೆರಿಯ, ಎಸ್.ಎನ್.ಕಾಲೇಜು ಉಪಾಧ್ಯಕ್ಷ ಡಾ.ವಿ. ಹೇಮಲತಾ, ಕಾಲೇಜಿನ ಎನ್‍ಎಎಸ್‍ಎಸ್ ಸಂಯೋಜಕ ಪಂಕಜ್ ಅಯಿಕೋಮಠ, ಹೊಸದುರ್ಗ ಉದ್ಯೋಗಾಧಿಕಾರಿ ಪಿ.ಟಿ.ಜಯಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಝಿಕ್ಕೋಡ್ ವಿಭಾಗೀಯ ಉದ್ಯೋಗಾಧಿಕಾರಿ ಎಂ.ಆರ್.ರವಿಕುಮಾರ್ ಸ್ವಾಗತಿಸಿ, ಜಿಲ್ಲಾ ಉದ್ಯೋಗಾಧಿಕಾರಿ ಕೆ.ಸಲೀಂ ವಂದಿಸಿದರು.






