ಕಾಸರಗೋಡು: ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡ ವಿದ್ಯಾರ್ಥಿಗಳ ಅವಗಣನೆ ಮುಂದುವರಿದಿದ್ದು, ಏಕಪಾತ್ರಾಭಿನಯ ಮತ್ತು ಲಲಿತಗಾನ ಕನ್ನಡ ವಿಭಾಗ ಸ್ಪರ್ಧೆಗಳಿಗೆ ಪ್ರತ್ಯೇಕ ತೀರ್ಪುಗಾರರನ್ನು ನೇಮಿಸದಿರುವುದು ಕನ್ನಡ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಯಿತು.
ಕಲೋತ್ಸವ ಮ್ಯಾನ್ಯುವೆಲ್‍ನಲ್ಲಿ ಕನ್ನಡ ವಿಭಾಗಕ್ಕೆ ಪ್ರತ್ಯೇಕ ತೀರ್ಪುಗಾರರನ್ನು ನೇಮಿಸಲು ವ್ಯವಸ್ಥೆಯಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿತ್ತು. ಇದರಿಂದ ಕನ್ನಡ ಸ್ಪರ್ಧಾಳುಗಳು ವೇದಿಕೆ ಆಗಮಿಸಿದಾಗ ಮಲಯಾಳಿ ತೀರ್ಪುಗಾರರು ತೆಪ್ಪಗಾಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಕನ್ನಡ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಮಾತ್ರ ಅವಕಾಶ ಲಭಿಸಿದ್ದು, ಯಾವುದೇ ಅಂಕಗಳಿಲ್ಲದೆ ವಾಪಸಾಗಬೇಕಾಯಿತು. ಕನ್ನಡ ಸ್ಪರ್ಧಾಳುಗಳಿಗೆ ಜಿಲ್ಲಾ ಕಲೋತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದಾಗ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ಲಭಿಸಿದ್ದರೂ, ಮ್ಯಾನ್ಯುವೆಲ್ ಲೋಪದಿಂದಾಗಿ ಕೆಲವು ಸ್ಪರ್ಧೆಗಳಲ್ಲಿ ಅಂಕ ಲಭಿಸದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಸಂವಿಧಾನಾತ್ಮಕ ಹಕ್ಕು ಕಸಿಯುವ ಯತ್ನವಾಗಿದೆ ಎಂದು ಕನ್ನಡಪರ ಸಂಘಟನೆ ಪದಾಧಿಕಾರಿಗಳು ದೂರಿದ್ದಾರೆ.
ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡ ವಿದ್ಯಾರ್ಥಿಗಳ ಅವಗಣನೆ-ಸ್ಪರ್ಧೆ ಮಾತ್ರ, ಅಂಕವಿಲ್ಲದ ಸ್ಥಿತಿ ಕನ್ನಡಿಗರದ್ದು
0
ಡಿಸೆಂಬರ್ 01, 2022
Tags




