ಬದಿಯಡ್ಕ: ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವವು ಆರಂಭವಾಗಿದ್ದು ಬುಧವಾರ ಬೆಳಗ್ಗೆ ಅನುಜ್ಞಾ ಕಲಶಾಭಿಷೇಕ ಜರಗಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ತಾಂತ್ರಿಕ ವಿಧಿವಿಧಾನಗಳು ಜರಗುತ್ತಿದ್ದು ಪ್ರಾತಃಕಾಲ ಶ್ರೀ ಮಹಾಗಣಪತಿ ಹೋಮ, ತತ್ವಕಲಶ, ತತ್ತ್ವ ಹೋಮ, ಅನುಜ್ಞಾ ಕಲಶಾಭಿಷೇಕ, ಅಂಕುರ ಪೂಜೆ, ತ್ರಿಕಾಲಪೂಜೆ ನಡೆಯಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ತಾಂತ್ರಿಕ ಕ್ರಿಯೆಗಳಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಅನೇಕ ಭಕ್ತಾದಿಗಳು ಭೋಜನ ಪ್ರಸಾದವನ್ನು ಸ್ವೀಕರಿಸಿದರು. ಗುರುವಾರ ಬೆಳಗ್ಗೆ ಮಹಾಗಣಪತಿ ಹೋಮ, ತ್ರಿಕಾಲಪೂಜೆ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶಾಭಿಷೇಕ ಜರಗಲಿದೆ.
ಹರಿದು ಬಂದ ಹಸಿರುವಾಣಿ :
ಉಬ್ರಂಗಳ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ಊರಿನ ನಾನಾ ಕಡೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಹರಿದುಬಂತು. ವಿವಿಧ ಸಂಘಸಂಸ್ಥೆಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳ ನೇತೃತ್ವದಲ್ಲಿ ಪ್ರತೀದಿನ ಹಸಿರುವಾಣಿ ಸಮರ್ಪಣೆಯಾಗುತ್ತಿದೆ. ಬೆಳಗ್ಗೆ ತಿಂಡಿ, ಚಹಾ, ಪಾನೀಯ, ಮಧ್ಯಾಹ್ನ ಹಾಗೂ ರಾತ್ರಿ ಪಾಯಸ ಸಹಿತ ಭೋಜನ ಪ್ರಸಾದದ ವ್ಯವಸ್ಥೆಯಿದೆ.






