ಕಾಸರಗೋಡು 'ಜನರಲ್ ಆಸ್ಪತ್ರೆಯ ಕಣ್ಮಣ' ಸುಂದರ ಅವರಿಗೆ ಡಿಸಿಸಿಯಿಂದ ಗೌರವಾರ್ಪಣೆ
0
ಡಿಸೆಂಬರ್ 14, 2022
ಕಾಸರಗೋಡು: ಕಳೆದ 50ವರ್ಷಗಳಿಂದ ಕಾಸರಗೋಡು ಜನರಲ್ ಆಸ್ಪತ್ರೆಯನ್ನು ತನ್ನ ಮನೆ, ಇಲ್ಲಿನ ಸಿಬ್ಬಂದಿಯನ್ನೇ ಕುಟುಂಬವನ್ನಾಗಿ ಅಲ್ಲೇ ಕೆಲಸ ನಿರ್ವಹಿಸಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿರುವ ಅಡೂರು ನಿವಾಸಿ ಸುಂದರ ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಗೌರವಿಸುವ ಕಾರ್ಯಕ್ರಮ ಜನರಲ್ ಆಸ್ಪತ್ರೆಯಲ್ಲಿ ಜರುಗಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಳ್ಳಯಿಲ್‍ವೀಡ್ ಅವರು ಸುಂದರ ಅವರನ್ನು ಶಾಲು ಹೊದಿಸಿ, ಹೊಸ ಬಟ್ಟೆ, ಫಲವಸ್ತು ನೀಡಿ ಗೌರವಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ಕೆ.ಕೆ ರಾಜಾರಾಂ, ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ. ಜಮಾಲ್, ಡಾ. ಸಿ.ಎಚ್. ಜನಾರ್ದನ ನಾಯ್ಕ್, ಡಾ. ನಾರಾಯಣ ನಾಯ್ಕ್, ಉಮೇಶ್ ಅಣಂಗೂರು, ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾದ ಅರ್ಜುನನ್ ತಾಐಲಂಗಾಡಿ, ಮುನೀರ್ ಬಾಂಗೋಡ್, ಕೆ. ಕಮಲಾಕ್ಷ ಸುವರ್ಣ, ಸಿ. ಶೀವಶಂಕರನ್, ಚಂದ್ರಶೇಖರನ್, ಜಯರಾಮ್ ಉಪಸ್ಥಿತರಿದ್ದರು.
ಐವತ್ತು ವರ್ಷಕ್ಕೂ ಹಿಂದೆ ರಸ್ತೆಬದಿ ಅನಾಥವಾಗಿ ಕಂಡುಬಂದ ಮಗುವನ್ನು ಚಿಕಿತ್ಸೆಗಾಗಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಣಮುಖನಾದ ನಂತರ ಇದೇ ಆಸ್ಪತ್ರೆಯಲ್ಲಿ ಸುಂದರ ಎಂಬ ಹೆಸರಿನಲ್ಲಿ ಬೆಳೆದು ದೊಡ್ಡವರಾಗಿದ್ದರು. ಆಸ್ಪತ್ರೆ ವೈದ್ಯರು, ದಾದಿಯರು ಸೇರಿದಂತೆ ಸಿಬ್ಬಂದಿಯನ್ನೇ ತನ್ನ ಕುಟುಂಬವಾಗಿ ಸ್ವೀಕರಿಸಿ ನಂತರ ಇದೇ ಆಸ್ಪತ್ರೆಯಲ್ಲಿ ಇವರಿಗೆ ಉದ್ಯೋಗವನ್ನೂ ನೀಡಲಾಗಿತ್ತು.
Tags




