HEALTH TIPS

ನಿದ್ದೆಬಿಟ್ಟು ಓದುವುದರಿಂದ ಪರೀಕ್ಷಾ ಸಿದ್ಧತೆ ಪೂರ್ಣಗೊಳ್ಳುವುದಿಲ್ಲ : ಶ್ಯಾಮ ಭಟ್: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ `ಸ್ಪಂದನ'


       ಬದಿಯಡ್ಕ: ಉತ್ತಮ ಪೂರ್ವ ಸಿದ್ಧತೆಯೊಂದಿಗೆ ಆರೋಗ್ಯದ ಕಾಳಜಿಯನ್ನಿಟ್ಟುಕೊಂಡು ಪರೀಕ್ಷೆಯನ್ನು ಎದುರಿಸಿದಾಗ ಅತ್ಯುತ್ತಮ ಅಂಕ ಗಳಿಕೆ ಸಾಧ್ಯವಿದೆ. ಪರೀಕ್ಷಾ ಸಿದ್ಧತೆಗೆ ನಿದ್ದೆಗೆಡುವುದು ಸರಿಯಲ್ಲ ಎಂದು ಗಣಿತಶಾಸ್ತ್ರ ಪರಿಣಿತ, ನವಜೀವನ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ಪೆರ್ಣೆ ನುಡಿದರು.
           ಶನಿವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪಂದನ 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
       ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ಪರೀಕ್ಷೆಯ ಒತ್ತಡವನ್ನು ಮಕ್ಕಳ ಮೇಲೆ ಹೇರದೆ ಎಲ್ಲಾ ಪ್ರಶ್ನೆಗಳಿಗೂ ಅವರ ತಿಳುವಳಿಕೆಯಲ್ಲಿರುವ ಉತ್ತರವನ್ನು ಧೈರ್ಯದಿಂದ ಬರೆಯಲು ಹುರಿದುಂಬಿಸಬೇಕು. ಪರೀಕ್ಷಾ ಪೂರ್ವ ಸಿದ್ಧತೆಯ ಬಗ್ಗೆ ವಿಷಯಾಧಾರಿತ ಪಠ್ಯಗಳ ಸಂಪೂರ್ಣ ವಿವರಣೆಗಳನ್ನು ಈಗಾಗಲೇ ಪಡೆದಿರುತ್ತೀರಿ. ಇನ್ನುಳಿದಿರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು, ಇತರೇ ಚಟುವಟಿಕೆಗಳನ್ನು ಸ್ವಲ್ಪ ಕಡಿಮೆ ಮಾಡಿ ಮಾರ್ಚ್ ತಿಂಗಳಿನಲ್ಲಿ ಬರುವ ಪರೀಕ್ಷೆಯನ್ನು ಆಶಾದಾಯಕವಾಗಿ ನೋಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಬಹುಮುಖ್ಯವಾಗಿದೆ. ಪರೀಕ್ಷೆಗೆ ನಿಗದಿಪಡಿಸಿದ ಸಮಯವನ್ನು ಸಂಪೂರ್ಣ ಉಪಯೋಗಿಸಿಕೊಳ್ಳಬೇಕು. 40 ವರ್ಷದ ಅನುಭವದಲ್ಲಿ ಎಷ್ಟೋ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದರೂ, ಇಲ್ಲಿನ ಸಮಾರಂಭ ಹೊಸ ಅನುಭವವನ್ನು ನೀಡಿದೆ. ವಿದ್ಯಾರ್ಥಿಗಳ ದೃಢತೆ, ಶಿಸ್ತು ಶ್ಲಾಘನೀಯವಾಗಿದೆ. ಉತ್ತಮ ಅಧ್ಯಾಪಕರ ತರಬೇತಿಯು ಮಕ್ಕಳಲ್ಲಿ ಕಂಡುಬರುತ್ತಿದೆ ಎಂದರು.
          ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಮಾತನಾಡುತ್ತಾ ಶಾಲೆಯು ಮಕ್ಕಳ ಅಭಿವೃದ್ಧಿಗೆ ಸತತವಾಗಿ ಪ್ರಯತ್ನಿಸುತ್ತಿದೆ. ಯಾವುದೇ ಗೊಂದಲವನ್ನಿಟ್ಟುಕೊಳ್ಳದೆ ಈ ವಿದ್ಯಾಸಂಸ್ಥೆಯು ನಿಮ್ಮ ಜೊತೆಗಿದೆ ಎಂಬ ಭರವಸೆಯೊಂದಿಗೆ ಜೀವನವನ್ನು ಎದುರಿಸಿ ಯಶಸ್ವಿಯಾಗಿ ಎಂದರು.
        ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ ಮಾತನಾಡಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ಪಂದನದ ಔಚಿತ್ಯವನ್ನು ವಿವರಿಸಿ ಇದು ಬೀಳ್ಕೊಡುಗೆ ಸಮಾರಂಭವಲ್ಲ, ಮುಂದಿನ ಜೀವನದ ಆರಂಭ ಎಂದರು. ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಬೆಳಗುವ ದೀಪವನ್ನು ನೀಡಿ ಶುಭಹಾರೈಸಲಾಯಿತು. ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ನೀಡಿ ಆಶೀರ್ವದಿಸಿದರು. ಇದೇ ಸಂರ್ದದಲ್ಲಿ ಅಧ್ಯಾಪಿಕೆ ರಾಜೇಶ್ವರಿ ಪೈಕ ರಚಿಸಿದ ಸುಂದರ ಗೀತೆಯನ್ನು 9ನೇ ತರಗತಿಯ ವಿದ್ಯಾರ್ಥಿನಿಯರು ಹಾಡಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನುಭವ ಬುತ್ತಿಯನ್ನು ಉಣಬಡಿಸಿದರು. ಪಾಲಕರು ಶಾಲೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 9ನೇ ತರಗತಿಯ ಅಂಕಿತ್ ಕೃಷ್ಣ ಪಟ್ಟಾಜೆ ಸ್ವಾಗತಿಸಿ, ಪೂಜಾ ಬೆಳಿಂಜ ವಂದಿಸಿದರು. 9ನೇ ತರಗತಿಯ ಬ್ರಿಜೇಶ್ ಕಾರ್ಯಕ್ರಮ ನಿರೂಪಿಸಿದರೆ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯನ್ನು ನೀಡಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries