ಪೆರ್ಲ: ಅಭಿವೃದ್ದಿಯ ಹೆಸರಲ್ಲಿ ಸರ್ಕಾರಿ ವ್ಯವಸ್ಥೆಗಳು ಕೈಗೊಳ್ಳುವ ಕೆಲವು ಕ್ರಮಗಳಿಂದ ಸಾರ್ವಜನಿಕರಿಗೆ ತೀವ್ರ ಸವಾಲುಗಳು ಎದುರಾಗುವುದು ಇತ್ತೀಚೆಗೆ ಹೆಚ್ಚಳಗೊಂಡಂತಿದೆ. ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ನಲ್ಕದಿಂದ ಬಿರ್ಮೂಲೆಗೆ ತೆರಳುವ 2.5 ಕಿಲೋಮೀಟರ್ ಗ್ರಾಮೀಣ ರಸ್ತೆಗೆ ಇಂತಹದೊಂದು ಸ್ಥಿತಿ ಎದುರಾಗಿದೆ.
ಕುಡಿಯುವ ನೀರು ಸರಬರಾಜಿಗೆ ಪೈಪ್ ಲೈನ್ ಅಳವಡಿಸುವ ಭಾಗವಾಗಿ ರಸ್ತೆ ಬದಿಯನ್ನು ಅವೈಜ್ಞಾನಿಕವಾಗಿ ಅಗೆಯಲಾಗುತ್ತಿದ್ದು, ಸಂಚಾರ ಸಮಸ್ಯೆ ನಿಯಂತ್ರಣಕ್ಕೊಳಪಟ್ಟಿರುವ ಜೊತೆಗೆ ಬಿ.ಎಸ್.ಎನ್.ಎಲ್. ಕೇಬಲ್ ಗಳು ಸಂಪೂರ್ಣ ಹಾನಿಗೊಂಡಿದ್ದು ಕುಗ್ರಾಮವದ ಜನತೆ ಪೋನ್ ಸಂಪರ್ಕ ಕಡಿತಗೊಂಡು ತೀವ್ರ ಸಂಕಷ್ಟಕ್ಕೊಳಗಾಗಿರುವುದು ಗಮನಕ್ಕೆ ಬಂದಿದೆ.
ಖಂಡಿಗೆ, ವರ್ಮುಡಿ, ಬಿರ್ಮೂಲೆ, ಪಾಪಿತ್ತಡ್ಕ, ಶುಳುವಾಲಮೂಲೆ ಮೊದಲಾದ ಪ್ರದೇಶಗಳ ಅಸಂಖ್ಯ ಗ್ರಾಹಕರು ಕಳೆದೊಂದು ವಾರದಿಂದ ವಾಹನ ಹಾಗೂ ಸಂಪರ್ಕ ಸಮಸ್ಯೆಗಳಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ. ವಿಶೇಷವೆಂದರೆ ನಲ್ಕ-ಬಿರ್ಮೂಲೆ ರಸ್ತೆಗೆ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಮರು ಡಾಮರೀಕರಣ ನಡೆದಿದ್ದು, ಇದೀಗ ರಸ್ತೆ ಅಗೆದು ಮತ್ತೆ ಸಮಸ್ಯೆ ಸೃಷ್ಟಿಯಾಗಿರುವುದರ ಬಗ್ಗೆ ಸ್ಥಳೀಯ ನಾಗರಿಕರು ವ್ಯಥೆಪಡುವಂತಾಗಿದೆ.
ಬಸ್ ಸೌಕರ್ಯವಿಲ್ಲದ ಈ ರಸ್ತೆಯ ಮೂಲಕ ದಿನನಿತ್ಯ ನೂರಾರು ಜನರು ಪೆರ್ಲ, ಬದಿಯಡ್ಕ, ಅಡ್ಯನಡ್ಕ, ವಿಟ್ಲ ಪ್ರದೇಶಗಳಿಗೆ ಖಾಸಗೀ ವಾಹನಗಳನ್ನೇ ಬಳಸಿ ಸಂಚರಿಸುವವರಾಗಿದ್ದು ಇದೀಗ ರಸ್ತೆ ಬದಿ ಅಗೆದು ರಸ್ತೆಯ ಮಧ್ಯದವರೆಗೂ ಮಣ್ಣು ಪೇರಿಸಿ ತ್ರಿಚಕ್ರ ಹಾಗೂ ನಾಲ್ಕುಚಕ್ರ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಿದ್ದು ದಿಕ್ಕೆಟ್ಟಿರುವ ಪ್ರದೇಶವಾಸಿಗಳು ಕಾಮಗಾರಿ ನಡೆಸುವವರಲ್ಲಿ ಮಾತನಾಡಲು ತೆರಳಿದರೆ ಹರಿಹಾಯ್ದು ಕಳಿಸುತ್ತಿರುವುದಾಗಿ ದೂರಲಾಗಿದೆ.
ಅಭಿಮತ: :
ದೂರವಾಣಿ ಕೇಬಲ್ ಗಳನ್ನು ಜಾಗ್ರತೆಯಿಂದ ನಿರ್ವಹಿಸುವಂತೆ ಪೈಪ್ ಲೈನ್ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಆದರೆ ಅವರು ಅಜಾಗ್ರತೆಯಿಂದ ನಿರ್ವಹಿಸಿದ್ದರಿಂದ ಸಮಸ್ಯೆ ತಲೆದೋರಿದ್ದು, ವಾಟರ್ ಅಥೋರಿಟಿಯ ಅಧಿಕೃತರೊಂದಿಗೆ ಚರ್ಚಿಸಿ ಶೀಘ್ರ ಪರಿಹಾರಕ್ಕೆ ಯತ್ನಿಸಲಾಗುವುದು. ಮತ್ತು ವಾಹನ ಸಂಚಾರ ನಿಯಂತ್ರಿಸದಂತೆ ಸೂಚಿಸಲಾಗಿದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
-ಆಶಾಲತ.
ಸದಸ್ಯೆ ಎಣ್ಮಕಜೆ ಗ್ರಾಮ ಪಂಚಾಯತಿ.




.jpg)
.jpg)
.jpg)
