ಬದಿಯಡ್ಕ: ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ವೇದ ನಾದ ಯೋಗ ತರಂಗಿಣಿ ಎಂಬ ನಾಲ್ಕು ದಿನಗಳ ವಾರ್ಷಿಕೋತ್ಸವ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಶುಕ್ರವಾರ ದೀಪ ಬೆಳಗಿ ಶುಭಾರಂಭ ಮಾಡಿದರು. ಸಂಗೀತವು ದೈವೀಕ ಕಲೆಯಾಗಿದ್ದು ಆ ಮೂಲಕವೂ ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೊಲ್ಲೂರಿನ ಅಡಿಗಳಾದ ಡಾ. ಕೆ. ಎನ್. ನರಸಿಂಹ ಅಡಿಗರ ನೇತೃತ್ವದಲ್ಲಿ ಚಂಡಿಕಾ ಹೋಮ ಜರಗಿತು. ಬಳಿಕ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಅವರ ಮುಂದಾಳತ್ವದಲ್ಲಿ ಮಹಾ ಶ್ರೀಚಕ್ರ ನವಾವರಣ ಪೂಜೆ ಏರ್ಪಟ್ಟಿತು. ಈ ಸಂದರ್ಭದಲ್ಲಿ ವೀಣಾವಾದಿನಿ ವಿದ್ಯಾರ್ಥಿಗಳು ನವಾವರಣ ಕೃತಿಗಳನ್ನು ಪ್ರಸ್ತುತಪಡಿಸಿದರು. ಆನಂತರ ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವು ನಾದಮಾಧುರಿ ಸಂಗೀತ ಕಚೇರಿ ನಡೆಸಿಕೊಟ್ಟರು.
ಸಂಜೆ ನವಗ್ರಹ ಪೂಜೆ, ನವಗ್ರಹ ಕೃತಿಗಳ ಪ್ರಸ್ತುತಿ, ಸುರಮಣಿ ಡಾ. ದತ್ತಾತ್ರೇಯ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿ ಜರಗಿತು. ಬಳಿಕ ಕಲಾಮಂಡಲಂ ಶ್ರೀಮತಿ ಶ್ಯಾಮಾ ರಂಜಿತ್ ಮತ್ತು ಆರ್.ಎಲ್.ವಿ. ಶಾರದಾ ರಮೇಶ್ ಅವರು ಮೋಹಿನಿ ಆಟ್ಟಮ್ ಪ್ರದರ್ಶಿಸಿದರು.
ಗುರುವಾರ ಲಕ್ಷಾರ್ಚನೆ, ಚಕ್ರಾಬ್ಜ ಪೂಜೆಯ ಬಳಿಕ ಯೋಗ ಗುರುಗಳಾದ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಈಶ ಯೋಗ ಕಾರ್ಯಕ್ರಮ ನಡೆದಿತ್ತು.
ಇಂದು ಭಾನುವಾರ ವೀಣಾವಾದಿನಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ವೀಣಾವಾದಿನಿ ಪುರಸ್ಕಾರ ಪ್ರದಾನವು ನಡೆಯಲಿದೆ. ಖ್ಯಾತ ಚಲಚಿತ್ರ ಸಂಗೀತ ನಿರ್ದೇಶಕ ಕೈದಪುರಂ ದಾಮೋದರ ನಂಬೂದಿರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ ಚೆನ್ನೈಯ ರಾಮಕೃಷ್ಣಮೂರ್ತಿ ಅವರಿಂದ ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಜರಗಲಿದೆ.




.jpg)
.jpg)
