ಪೆರ್ಲ: ಪೆರ್ಲ ಸೇವಾ ಸಹಕಾರಿ ಬ್ಯಾಂಕ್‍ನ ಆಡಳಿತ ಸಮಿತಿಗೆ ನಿರ್ದೇಶಕರ ಆಯ್ಕೆಗಾಗಿ ಮಾ 19ರಂದು ಚುನಾವಣೆ ನಡೆಯಲಿದ್ದು, ಈ ಬಾರಿ 23ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಕಳೆದ ಎರಡುವರೆ ದಶಕದಿಂದ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಆರೆಸ್ಸೆಸ್ ನೇತೃತ್ವದ ಸಹಕಾರ ಭಾರತಿ ವಶದಲ್ಲಿದ್ದು, ಇದೇ ಮೊದಲ ಬಾರಿಗೆ ಆಡಳಿತಾರೂಢ ಸಹಕಾರ ಭಾರತಿಯ ಅತೃಪ್ತರು ಸಂಸ್ಕಾರ ಭಾರತಿ ಎಂಬ ಒಕ್ಕೂಟ ರಚಿಸಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಹನ್ನೊಂದು ಮಂದಿ ನಿರ್ದೇಶಕರ ಆಯ್ಕೆಗಾಗಿ ಸಹಕಾರ ಭಾರತಿ ಹಾಗೂ ಸಂಸ್ಕಾರ ಭಾರತಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಡಿ. ರಾಮ ಭಟ್ ಅವರೂ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಎದುರಾಳಿಗಳಿಲ್ಲದೆ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ನಿದರ್ಶನಗಳಿವೆ.
ಸಹಕಾರ ಭಾರತಿಯಿಂದ ವೈ. ಕೃಷ್ಣ ಭಟ್, ಕೃಷ್ಣ ಬಂಗೇರ, ನಾರಾಯಣ ಪ್ರಸಾದ್, ಟಿ. ಪ್ರಸಾದ್, ಎನ್. ರಮೇಶ್, ಕೆ. ಶಿವಕುಮಾರ್, ಶ್ಯಾಮಲಾ ಭಟ್, ದೇವಿಕಾ ವೆಂಕಟೇಶ್, ಕವಿತ, ರೇಖಜ್ಯೋತಿ, ವೆಂಕಟೇಶ ನಾಯಕ್ ಅಬ್ಯರ್ಥಿಗಳಾಗಿದ್ದರೆ, ಸಂಸ್ಕಾರ ಭಾರತಿಯಿಂದ ಬಿ. ಚಂದ್ರಶೇಖರ, ಎನ್. ಕಿಶೋರ್ ಕುಮಾರ್, ಕೆ. ಪ್ರಕಾಶ್ ಶೆಟ್ಟಿ, ರಮಾನಂದ ಎಡಮಲೆ, ಸೀತಾರಾಮ ರೈ, ಉದಯ ಚೆಟ್ಟಿಯಾರ್, ಬಿ.ದಿವ್ಯಾ, ಬಿ. ಸುಧಾಕುಮಾರಿ, ಪಿ.ವಾರಿಜಾ, ಪಿ.ರವೀಂದ್ರ ನಾಯಕ್, ಸತೀಶ್ ಕುಲಾಲ್ ಅಭ್ಯಥಿಗಳಾಗಿ ಕಣದಲ್ಲಿದ್ದಾರೆ.
ಈ ಬಾರಿ ಸಹಕಾರ ಭಾರತಿ ಮತ್ತು ಸಂಸ್ಕಾರ ಭಾರತಿ ಪರಸ್ಪರ ಚುನಾವಣಾ ಕಣದಲ್ಲಿ ಸೆಣಸಾಡುತ್ತಿರುವುದನ್ನು ಐಕ್ಯರಂಗ ಹಾಗೂ ಎಡರಂಗ ಅತ್ಯಂತ ಕುತೂಹಲದಿಂದ ವೀಕ್ಞಿಸುವಂತಾಗಿದೆ. ಕಾರ್ಯಕರ್ತರ ಅಭಿಪ್ರಾಯ ಆಲಿಸದ ನಾಯಕತ್ವ, ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಮತ್ತು ಸಹಕಾರ ಭಾರತಿಯ ಸ್ಥಳೀಯ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಒಂದು ವಿಭಾಗದ ಕಾರ್ಯಕರ್ತರನ್ನು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಪ್ರೇರೇಪಿಸಿದೆಯೆನ್ನಲಾಗಿದೆ.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ: ಸಹಕಾರ ಭಾರತಿಗೆ ಸಡ್ಡು ಹೊಡೆದು ಕಣಕ್ಕಿಳಿದ ಸಂಸ್ಕಾರ ಭಾರತಿ
0
ಮಾರ್ಚ್ 12, 2023
Tags




