ಕಾಸರಗೋಡು: ಕುಂಬಳೆ ಸನಿಹದ ನಾಯ್ಕಾಪಿನಲ್ಲಿ ಚಟುವಟಿಕೆ ನಡೆಸುತ್ತಿರುವ ಜೆ.ಕೆ ಅಕಾಡಮಿ ನೇತೃತ್ವದಲ್ಲಿ ಅಖಿಲಭಾರತ ಪುರುಷ-ಮಹಿಳಾ ಕಬಡ್ಡಿ ಪಂದ್ಯಾಟ ಗುರುವಾರ ನಾಯ್ಕಾಪಿನ ಜೆ.ಕೆ ಅಕಾಡಮಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿತು. ಕಬಡ್ಡಿ ಪಂದ್ಯಾಟದಲ್ಲಿ 80ಕ್ಕೂ ಹೆಚ್ಚು ಮಮದಿ ಪ್ರೋ ಕಬಡ್ಡಿ ಪಟುಗಳು ಪಾಲ್ಗೊಳ್ಳುತ್ತಿದ್ದಾರೆ.
ಪಂದ್ಯಾಟ ಏ. 30ರ ವರೆಗೆ ನಡೆಯಲಿದ್ದು, ಎಎಸ್‍ಸಿಐ ದೆಹಲಿ, ಇಂಡಿಯನ್ ಆರ್ಮಿ, ಇಮಡಿಯನ್ ನೇವಿ, ಹರಿಯಾಣ, ನಾಗ್‍ಪುರ್ ರೈಲ್ವೆ, ತಮಿಳ್ನಾಡು, ಯಾದವ್ ಅಕಾಡಮಿ ಕರ್ನಾಟಕ, ಜೆ.ಕೆ ಅಕಾಡಮಿ ಸೇರಿದಂತೆ 16 ಪ್ರಮುಖ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಿದೆ. ಕೇರಳ, ಕರ್ನಾಟಕ, ತಮಿಳ್ನಾಡಿನ ಮೂರು ಮಹಿಳಾ ತಂಡಗಳು ಗುರುವಾರ ನಡೆದ ತಂಡದಲ್ಲಿ ಪಾಲ್ಗೊಂಡಿತ್ತು.
ಕಾರ್ಯಕ್ರಮ ಯಶಸ್ಸಿಗೆ ಮನವಿ:
ನಾಲ್ಕು ದಿವಸಗಳ ಕಾಲ ಜೆ.ಕೆ ಅಕಾಡಮಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಯಶಸ್ವಿಗೊಳಿಸುವಂತೆ ಅಖಿಲಭಾರತ ಪುರುಷ-ಮಹಿಳಾ ಕಬಡ್ಡಿ ಚಾಂಪ್ಯನ್‍ಶಿಪ್ ಸಮಿತಿ ಅಧ್ಯಕ್ಷ, ಶಾಸಕ ಎ.ಕೆ.ಎಂ ಅಶ್ರಫ್ ಮನವಿ ಮಾಡಿದ್ದಾರೆ. ಪ್ರತಿ ದಿನ ಸಂಜೆ 4ರಿಂದ ರಾತ್ರಿ 12ರ ವರೆಗೆ ಪಂದ್ಯಾಟ ಜರುಗಲಿದೆ. ಲೀಗ್ ಪಂದ್ಯ ನಡೆಯಲಿದ್ದು, ವಿಜೇತ ತಂಡಗಳಿಗೆ ಮೂರು ಲಕ್ಷ ರೂ. ವರೆಗೆ ನಗದು ಬಹುಮಾನ, ಶಾಶ್ವತಫಲಕ ನೀಡಲಾಗುವುದು. ದೇಶದ ವಿವಿಧ ರಾಜ್ಯಗಳ ಕ್ರೀಡಾಳುಗಳು ಪಂದ್ಯಾಟದಲ್ಲಿ ಭಾಗವಹಿಸಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆ.ಕೆ ಅಕಾಡಮಿಯ ಅಧ್ಯಕ್ಷ, ರಾಷ್ಟ್ರೀಯ ಕಬಡ್ಡಿ ತಾರೆ ಜಗದೀಶ್ ಕುಂಬಳೆ, ಪ್ರೋ ಕಬಡ್ಡಿಪಟುಗಳಾದ ಸುರ್ಜಿತ್ ಸಿಂಗ್(ಹರಿಯಾಣ), ನಿತಿನ್ ಥೋಮರ್(ಉತ್ತರಪ್ರದೇಶ), ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪ್ರವೀಣ್‍ರಾಜ್ ಉಪಸ್ಥಿತರಿದ್ದರು.





