ಕಾಸರಗೋಡು: ಜಿಲ್ಲೆಯ ಗಡಿ ಭಾಗಗಳಲ್ಲಿ ಕಲಬೆರಕೆ ಚಹಾವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಆಹಾರ ಸುರಕ್ಷಾ ವಿಭಾಗ ಅಧಿಕಾರಿಗಳು ವಿವಿಧೆಡೆ ನಡೆಸಿದ ದಾಳಿಯಲ್ಲಿ ಆರು ಕ್ವಿಂಟಾಲ್ ಕಲಬೆರಕೆ ಚಹಾ ಹುಡಿ ಪತ್ತೆಹಚ್ಚಿದ್ದಾರೆ.
ಮಂಜೇಶ್ವರ, ಹೊಸಂಗಡಿ, ಸೀತಾಂಗೋಳಿಯಲ್ಲಿ ದಾಳಿ ನಡೆಸಲಾಗಿದೆ. ಗೋದಾಮಿಗೆ ದಾಳಿ ನಡೆಸಿದ ಅಧಿಕಾರಿಗಳು ಮಾದರಿ ಸಂಗ್ರಹಿಸಿ ಕೋಯಿಕ್ಕಾಡಿನ ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದು, ಇದರ ತಪಾಸಣಾ ವರದಿ ಕೈಸೇರುತ್ತಿದ್ದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ಚಹಾಹುಡಿ ತಯಾರಕರು ಮತ್ತು ಪೂರೈಕೆದಾರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಚಹಾ ಹುಡಿಗೆ ಕೃತಕ ಬಣ್ಣ ಹಾಗೂ ಇತರ ಉತ್ಪನ್ನ ಕಲಬೆರಕೆ ನಡೆಸಿರುವುದು ತಪಾಸಣೆಯಿಂದ ಪತ್ತೆಯಾಗಿದೆ. ವಿಶೇಷ ಕಾರ್ಯಾಚರಣೆ ಪಡೆ ಮುಖ್ಯಸ್ಥ ಎರ್ನಾಕುಲಂ ಡೆಪ್ಯುಟಿ ಕಮಿಷನರ್ ಜೇಕಬ್ ಥಾಮಸ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ತಂಡದಲ್ಲಿ ಸಹಾಯಕ ಆಯುಕ್ತ ಅಜಿ. ಎಸ್, ಆಹಾರ ಸುರಕ್ಷತಾ ಅಧಿಕಾರಿಗಳಾದ ಜಾಕೀರ್ ಹುಸೇನ್, ಜೋಸೆಫ್ ಕುರಿಯಾಕೋಸ್, ಕಛೇರಿ ಸಿಬ್ಬಂದಿ ಸಿನೋಜ್ ವಿ.ಕೆ ಭಾಗವಹಿಸಿದ್ದರು.





