ಕಾಸರಗೋಡು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ಸ್ಥಳೀಯಾಡಳಿತ-ಅಬಕಾರಿ ಖಾತೆ ಸಚಿವ ಎಂ.ಬಿ ರಾಜೇಶ್ ಅವರು ಕಾಸರಗೋಡು ನಗರಸಭಾ ಕಚೇರಿ ಆಸುಪಾಸಿನ ಚಂದ್ರಗಿರಿ ಹೊಳೆ ಸನಿಹದ ರಸ್ತೆಯಲ್ಲಿ ನಡೆದಾಡಿದ ತಾಸಿನೊಳಗೆ ತ್ಯಾಜ್ಯದಿಂದ ತುಂಬಿಕೊಂಡಿದ್ದ ರಸ್ತೆ ಸಂಪೂರ್ಣ ಶುಚೀಕರಣಗೊಂಡಿದೆ!
ಕಾಸರಗೋಡಿನ ಟೌನ್‍ಹಾಲ್ ಸಭಾಂಗಣದ ಹಿಂಭಾಗದ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಚಿವರು ನಡೆದು ಹೋಗುತ್ತಿದ್ದಂತೆ ಭಾರಿ ಮಾಲಿನ್ಯದ ದರ್ಶನವಾಗಿದೆ. ಇದರಿಂದ ಗರಂ ಆದ ಸಚಿವರು ನೇರ ತಮ್ಮ ಕೊಠಡಿಗೆ ತೆರಳಿ ನಗರಸಭಾ ಆರೋಗ್ಯ ಅಧಿಕಾರಿಗಳನ್ನು ತಮ್ಮ ಕೊಠಡಿಗೆ ಕರೆಸಿಕೊಂಡಿದ್ದಾರೆ. ತ್ಯಾಜ್ಯ ತೆರವುಗೊಳಿಸದಿರುವ ಬಗ್ಗೆ ಅಧಿಕಾರಿಗಳಿಗೆ ತರಗತಿ ತೆಗೆದುಕೊಂಡ ಸಚಿವ ಎಂ.ಬಿ ರಾಜೇಶ್ ಮಾಲಿನ್ಯಮುಕ್ತ ಕೇರಳ ಯೋಜನೆಗೆ ರಸ್ತೆಬದಿ ತುಂಬಿಕೊಂಡಿರುವ ತ್ಯಾಜ್ಯರಾಶಿ ಧಕ್ಕೆಯುಂಟಾಗಲಿದೆ. ಶೀಘ್ರ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಜತೆಗೆ ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಸಚಿವರ ಆದೇಶ ಹೊರಬಿದ್ದ ತಾಸಿನೊಳಗೆ ನಗರಸಭಾ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ರಸ್ತೆ ಬದಿ ಶುಚೀಕರಣ ನಡೆಸಿದ್ದಾರೆ.


