ಕಾಸರಗೋಡು: ಜಿಲ್ಲೆಯ ಪ್ರತಿಯೊಂದು ಪ್ರದೇಶದಲ್ಲಿ ಜಲ ಸಂಪನ್ಮೂಲಗಳ ನಿರ್ವಹಣೆಯನ್ನು ಖಾತ್ರಿಪಡಿಸುವ ಮೂಲಕ ವಿವಿಧ ಉದ್ದೇಶಗಳಿಗಾಗಿ ನಿಯಮಿತವಾಗಿ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಹಸಿರು ಕೇರಳಮಿಷನ್, ನೀರಾವರಿ ಇಲಾಖೆ ಮತ್ತು ಕೋಯಿಕ್ಕೋಡಿನ ಜಲಸಂಪನ್ಮೂಲ ಅಭಿವೃದ್ಧಿ ಕೇಂದ್ರದ ತಾಂತ್ರಿಕ ನೆರವಿನೊಂದಿಗೆ ಸ್ಥಳೀಯಾಡಳಿತ ಸಂಸ್ಥೆ ಮಟ್ಟದಲ್ಲಿ ಪ್ರಾಯೋಗಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತದೆ.
ಜಿಲ್ಲಾ ನಿರ್ದಿಷ್ಟ ಯೋಜನೆಯನ್ನು ಆಗಸ್ಟ್ 17 ರಂದು ಜಿಲ್ಲಾ ಮಟ್ಟದಲ್ಲಿ ಪ್ರಕಟಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರಸಭೆಯಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಮಳೆಯ ಪ್ರಮಾಣವನ್ನು ನಿರ್ಧರಿಸುವುದರ ಜತೆಗೆ ಕೃಷಿ, ಪಶುಸಂಗೋಪನೆ, ದೇಶೀಯ, ಕೈಗಾರಿಕೆ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ನೀರಿನ ಬೇಡಿಕೆಯ ನಡುವಿನ ವ್ಯತ್ಯಾಸವನ್ನು ಲೆಕ್ಕಾಚಾರ ಮಾಡುವುದು ಜಲ ಬಜೆಟ್ ಉದ್ದೇಶವಾಇದೆ. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷರ ಸಭೆಯಲ್ಲಿ ಮೇ 25ರೊಳಗೆ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಉಪಾಧ್ಯಕ್ಷ ಶಾನವಾಜ್ ಪಾದೂರು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ಗ್ರಾ.ಪಂರಾಜ್ಯ ಕಾರ್ಯಕಾರಿಣಿ ಸದಸ್ಯ ಟಿ.ಕೆ.ರವಿ ಉಪಸ್ಥಿತರಿದ್ದರು. ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಅವರು ಜಲ ಬಜೆಟ್ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ವಿವರಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಜಿ.ಶೆರಿ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್ ವಂದಿಸಿದರು.





