ಕಾಸರಗೋಡು: ಮಹಿಳೆಯರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಕುಟುಂಬಶ್ರೀ ಪಾತ್ರ ಮಹತ್ತರವಾದುದು ಎಂದು ಕೇರಳ ಸ್ಥಳೀಯಾಡಳಿತ ಮತ್ತು ಅಬಕಾರಿ ಖಾತೆ ಸಚಿವ ಎಂ.ಬಿ ರಾಜೇಶ್ ತಿಳಿಸಿದ್ದಾರೆ. ಅವರು ಸೀತಾಂಗೋಳಿಯ ಅಲಯನ್ಸ್ ಕನ್ವೆನ್ಶನ್ ಹಾಲ್‍ನಲ್ಲಿ ಕುಟುಂಬಶ್ರೀ ಜಿಲ್ಲಾ ಮಿಶನ್ ಆಯೋಜಿಸಿದ್ದ ಕನ್ನಡ ಸ್ಪೆಶ್ಯಲ್ ಪ್ರೋಜೆಕ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡತನ ನಿವಾರಣೆಗಾಗಿ 25ವರ್ಷಗಳ ಹಿಂದೆ ರೂಪುಗೊಂಡ ಕುಟುಂಬಶ್ರೀ ಸಂಘಟನೆ ಇಂದು ಅಚ್ಚರಿಯ ಅಭಿವೃದ್ಧಿ ಸಾಧಿಸಿದೆ. ಎಲ್ಲ ರಂಗಗಳಲ್ಲೂ ಮುಂಚೂಣಿಯ ಸಾಧನೆ ತೋರುತ್ತಿರುವ ಕುಟುಂಬಶ್ರೀ ತನ್ನದೇ ಆದ ಜಾಲವ್ಯವಸ್ಥೆ ಹೊಂದಿದ್ದು, ಬಡತನ ಪ್ರಮಾಣವನ್ನು ತಗ್ಗಿಸುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದರ ಪರಿಣಾಮ ಕೇರಳದಲ್ಲಿ ಬಡತನ ಸೂಚ್ಯಂಕ 0.71ಕ್ಕೂ ಕಡಿಮೆಯಿದೆ. ಕನ್ನಡ ಪ್ರದೇಶದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿರಿಸಿ ಕುಟುಂಬಶ್ರೀ ಮೂಲಕ ವಿವಿಧ ಯೋಜನೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲಾಕ್‍ಗಳ 15ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ತಯಾರಿಸಲಾಗುವುದು ಎಂದು ತಿಳಿಸಿದರು.
ಶುಚಿತ್ವದಲ್ಲೂ ಮುಂಚೂಣಿ:
ಕೇರಳದಲ್ಲಿ ಶುಚಿತ್ವ ಮಿಷನ್ ನಡೆಸುವ ಕಾರ್ಯಾಚರಣೆಯಲ್ಲಿ ಕುಟುಂಬಶ್ರೀ ಸದಸ್ಯರದೇ ಮೇಲುಗೈ ಇದೆ. ಇದಕ್ಕಾಗಿ ಹಸಿರು ಕ್ರಿಯಾಸೇನೆ ಚಟುವಟಿಕೆ ನಡೆಸುತ್ತಿದ್ದು, ಕೇರಳದಲ್ಲಿ 31ಸಾವಿರಕ್ಕೂ ಹೆಚ್ಚು ಮಂದಿ ಇದರ ಸದಸ್ಯರಾಗಿದ್ದಾರೆ. ಪರಿಸರ ಶುಚಿತ್ವ ಪಾಲಿಸದಿದ್ದಲ್ಲಿ ಯಾವುದೇ ನೈರ್ಮಲ್ಯ ಯೋಜನೆ ಯಶಸ್ವಿಯಾಗದು. ಜಿಲ್ಲೆಯ ಮಂಗಲ್ಪಾಡಿ ಪಂಚಾಯಿತಿಯಲ್ಲಿ ತ್ಯಾಜ್ಯ ಸಂಸ್ಕರಣೆ ವಿಚಾರದಲ್ಲಿ ಲೋಪವೆಸಗಿರುವ ಪಂಚಾಯಿತಿ ಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕರಿಗೆ ಖುದ್ದು ಹಾಜರಾಗಿ ಚರ್ಚಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಜೇಶ್ವರ ಬ್ಲಾಕ್ ಪಂ ಅಧ್ಯಕ್ಷೆ ಶೆಮೀಮಾ ಟೀಚರ್, ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯೂ, ಕಾಸರಗೋಡು ಬ್ಲಾಕ್ ಪಂ ಅಧ್ಯಕ್ಷೆ ಸೈಮಾ ಸಿ.ಎ, ಸ್ವಾಗತ ಸಂಘ ಅಧ್ಯಕ್ಷ ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಆಳ್ವ, ಜಿಲ್ಲಾ ಪಂ. ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಕೋರ್ಡಿನೇಟರ್ ಇಕ್ಬಾಲ್ ಸಿ.ಎಚ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.





