ನವದೆಹಲಿ: ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಘ-ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ನಿಗ್ರಹ ಸಮಿತಿ ರಚನೆಯಾಗಿದೆಯೇ ಎಂದು ಕಾಲಮಿತಿಯೊಳಗೆ ಪರಿಶೀಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೋಹ್ಲಿ ಅವರಿದ್ದ ನ್ಯಾಯಪೀಠವು, 'ಸುದೀರ್ಘ ಸಮಯ ಕಳೆದರೂ 2013ರ ಲೈಂಗಿಕ ದೌರ್ಜನ್ಯ ನಿಗ್ರಹ ಕಾಯ್ದೆ ಜಾರಿಯಲ್ಲಿ ಗಂಭೀರ ಲೋಪಗಳಾಗುತ್ತಿವೆ' ಎಂದು ಬೇಸರ ವ್ಯಕ್ತಪಡಿಸಿತು.
'ಅಸಮರ್ಪಕ ಸಮಿತಿಯು ನಡೆಸಿದ 'ಅರೆಬೆಂದ' ತನಿಖೆಯು ತಪ್ಪಿತಸ್ಥ ಉದ್ಯೋಗಿಗಳಿಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುವಂಥ ಗಂಭೀರ ಪರಿಣಾಮಗಳಿಗೂ ಕಾರಣವಾಗುತ್ತದೆ' ಎಂದು ಪೀಠ ಅಭಿಪ್ರಾಯಪಟ್ಟಿತು.
ಸಮಿತಿಗೆ ಸಂಬಂಧಿಸಿದಂತೆ ಇ-ಮೇಲ್ ಐಡಿ, ಪ್ರಮುಖರ ಫೋನ್ ನಂಬರ್, ಆನ್‌ಲೈನ್ ದೂರು ದಾಖಲಿಸುವ ವಿಧಾನ ಮುಂತಾದವನ್ನು ಸಂಬಂಧಿತ ಸಚಿವಾಲಯ ಅಥವಾ ಇಲಾಖೆಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಕೋರ್ಟ್ ಸೂಚಿಸಿತು.
ಈ ಆದೇಶ ಪಾಲನೆಗೆ ನ್ಯಾಯಾಲಯ ಎಂಟು ವಾರಗಳ ಗಡುವು ನಿಗದಿ ಮಾಡಿದೆ.
ಕೆಲಸದ ಸ್ಥಳವು ಮಹಿಳಾ ಉದ್ಯೋಗಿಗಳ ಅಗತ್ಯಗಳಿಗೆ ಈಗಲೂ ಪ್ರತಿಕೂಲ, ಸಂವೇದನಾರಹಿತವಾಗಿದ್ದರೆ 2013ರ ಕಾಯ್ದೆಯು ನೆಪಮಾತ್ರಕ್ಕೆ ಅಸ್ತಿತ್ವದಲ್ಲಿದೆ ಎಂದರ್ಥ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
'ಉದ್ಯೋಗದ ಸ್ಥಳದಲ್ಲಿ ಅಧಿಕಾರಿಗಳು, ಆಡಳಿತ ಮಂಡಳಿ ಅಥವಾ ಉದ್ಯೋಗಿಗಳು ಮಹಿಳೆಯರಿಗೆ ಸುರಕ್ಷತಾ ವಾತಾವರಣವನ್ನು ಕಲ್ಪಿಸದಿದ್ದರೆ ಅವರು ಮನೆಯಿಂದ ಹೊರಬರಲು ಭಯಪಡುತ್ತಾರೆ. ಇದರಿಂದ ಅವರ ಪ್ರತಿಭೆ ಮತ್ತು ಕೌಶಲ್ಯವನ್ನು ಹತ್ತಿಕ್ಕಿದಂತಾಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲೈಂಗಿಕ ದೌರ್ಜನ್ಯ ನಿಗ್ರಹ ಕಾಯ್ದೆ -2013 ತುರ್ತಾಗಿ ಅನುಷ್ಠಾನ ಮಾಡಲು ಇದು ಸಕಾಲ. ಕೇಂದ್ರ ಮತ್ತು ರಾಜ್ಯಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಘನತೆ ಮತ್ತು ಗೌರವ ಒದಗಿಸುವುದು ಅಸಾಧ್ಯ' ಎಂದು ಎಂದು ನ್ಯಾಯಮೂರ್ತಿ ಕೊಹ್ಲಿ ಅವರು ಹೇಳಿದರು.
ಲೈಂಗಿಕ ದೌರ್ಜನ್ಯ ಎದುರಿಸುವ ಮಹಿಳೆಯರಲ್ಲಿ ಬಹುತೇಕರು ಆ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ. ಹಲವರು ಕೆಲಸವನ್ನೇ ತ್ಯಜಿಸುತ್ತಾರೆ. ಯಾರನ್ನು ಸಂಪರ್ಕಿಸುವುದು, ಯಾರಿಗೆ ದೂರು ನೀಡುವುದು ಎಂಬ ಗೊಂದಲವೇ ಇದಕ್ಕೆ ಕಾರಣ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಗೋವಾ ವಿಶ್ವವಿದ್ಯಾಲಯದ ವಿಭಾಗವೊಂದರ ಮಾಜಿ ಮುಖ್ಯಸ್ಥ ಆರೆಲಿಯಾನೊ ಫೆರ್ನಾಂಡೀಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ ನ್ಯಾಯಾಲಯ, ತನಿಖಾ ಪ್ರಕ್ರಿಯೆಯಲ್ಲಿ ಲೋಪಗಳಿವೆ ಮತ್ತು ನೈತಿಕ ನ್ಯಾಯ ನೀತಿ ಪಾಲನೆಯಲ್ಲಿ ಉಲ್ಲಂಘನೆಯಾಗಿದೆ ಎಂದು ಹೇಳಿತು.





