ಲಖನೌ: ವಾರಾಣಸಿಯ ಕಾಶಿ ದೇಗುಲದ ಸಂಕೀರ್ಣದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗ ರೂಪದ ರಚನೆಯ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಹಸಿರು ನಿಶಾನೆ ನೀಡಿದೆ.
ಕಳೆದ ವರ್ಷ ಮಸೀದಿಯ ಆವರಣದೊಳಗೆ ವಿಡಿಯೊ ಸಮೀಕ್ಷೆ ನಡೆಸಿದ್ದ ವೇಳೆ ಶಿವಲಿಂಗ ರೂಪದ ರಚನೆ ಪತ್ತೆಯಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ವಾರಾಣಸಿ ನ್ಯಾಯಾಲಯವು, 'ಪರೀಕ್ಷೆಗೆ ಅನುಮತಿ ನೀಡಿದರೆ ಜಾಗಕ್ಕೆ ಹಾನಿಯಾಗುತ್ತದೆ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ' ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮಹಿಳೆಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರ ಅವರಿದ್ದ ಏಕ ಸದಸ್ಯ ಪೀಠವು, 'ಶಿವಲಿಂಗದ ಕಾಲಮಾನ, ಸ್ವಭಾವ ಹಾಗೂ ಇತರ ಮಾಹಿತಿಗಳ ಬಗ್ಗೆ ತಿಳಿಯಲು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕು. ಶಿವಲಿಂಗಕ್ಕೆ ಯಾವುದೇ ಹಾನಿ ಮಾಡಬಾರದು' ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸೂಚಿಸಿದೆ.
ಈ ಮೊದಲು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್, 'ಕಾರ್ಬನ್ ಡೇಟಿಂಗ್ ಪರೀಕ್ಷೆ ಮಾಡಲು ಸಾಧ್ಯವೇ' ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆಗೆ ಸೂಚಿಸಿತ್ತು. ಗುರುವಾರ ಮುಚ್ಚಿದ ಲಕೋಟೆಯಲ್ಲಿ ಇಲಾಖೆಯು ನ್ಯಾಯಪೀಠಕ್ಕೆ ವರದಿ ಸಲ್ಲಿಸಿದೆ.
ಎರಡೂ ಸಮುದಾಯಗಳಿಗೂ ಈ ವಿಷಯ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ಈ ಹಿಂದೆ ಹಿಂದೂ ದೇಗುಲ ಇತ್ತು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್ ಇದನ್ನು ಧ್ವಂಸಗೊಳಿಸಿದ್ದಾನೆ. ಇಲ್ಲಿನ ನೀರಿನ ತೊಟ್ಟಿಯಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಇದನ್ನು ಮೊಹರು ಮಾಡಿ ಇರಿಸಲು ನ್ಯಾಯಾಲಯ ಸೂಚಿಸಿದೆ. ಇಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂಬುದು ಹಿಂದೂ ಪರ ವಕೀಲರ ವಾದವಾಗಿದೆ.
ಇದಕ್ಕೆ ಮುಸ್ಲಿಂ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು, 'ಔರಂಗಜೇಬ್‌ನ ಆಡಳಿತಕ್ಕೂ ಮೊದಲೇ ಇಲ್ಲಿ ಮಸೀದಿ ಇದ್ದ ಕುರುಹುಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ವಿಡಿಯೊ ಸಮೀಕ್ಷೆಯಲ್ಲಿ ಕಂಡುಬಂದಿರುವ ಆಕೃತಿಯು ಕಾರಂಜಿಯ ಮೂಲವಾಗಿದೆ; ಇದು ಶಿವಲಿಂಗವಲ್ಲ' ಎಂದು ವಾದಿಸುತ್ತಾರೆ.





