ಕಾಸರಗೋಡು: ಕೇರಳ ಜಲ ಪ್ರಾಧಿಕಾರ ಎಂಡಿಯಾಗಿ ವರ್ಗಾವಣೆಗೊಳ್ಳುತ್ತಿರುವ ಕಾಸರಗೋಡು ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರನ್ನು ಕಾಞಂಗಾಡಿನಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ನನ್ನ ಕೇರಳ ಪ್ರದರ್ಶನ-ಮಾರಾಟ ಮೇಳದ ವೇದಿಕೆಯಲ್ಲಿ ಶಾಸಕ ಸಿ.ಎಚ್ ಕುಞಂಬು ಸ್ಮರಣಿಕೆ ನೀಡಿ ಗೌರವಿಸಿದರು. ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣವೀರಚಂದ್ 2021ನೇ ಜುಲೈ 13ರಂದು ಜಿಲ್ಲೆಯ 24ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೋವಿಡ್ ಉತ್ತುಂಗಾವಸ್ಥೆಯಲ್ಲಿದ್ದ ಸಂದರ್ಭ ಕೋವಿಡ್ ತಡೆಗಟ್ಟಲು ಇವರು ನಡೆಸಿದ ಕಾರ್ಯಾಚರಣೆ ಯಶಸ್ಸಿಗೆ ಕಾರಣವಾಗಿತ್ತು.
ಎಂಡೋಸಲ್ಫಾನ್ ಸಂಕಷ್ಟವನ್ನು ಬಿತ್ತಿದ ಕಾಸರಗೋಡಿನ ಮಣ್ಣಿನಲ್ಲಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿಕೊಡುವಲ್ಲೂ ಭಂಡಾರಿ ಸ್ವಾಗತ್ ರಣವೀರಚಂದ್ ಮಹತ್ವದ ಕೆಲಸ ನಿಭಾಯಿಸಿದ್ದರು. ಸುಪ್ರೀಂ ಕೋರ್ಟ್ ಆದೇಶವನ್ನು ಆಧರಿಸಿz ಸಂತ್ರಸ್ತರಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ತಲುಪಿಸಲು ಮಾಡಿದ ಗಮನಾರ್ಹ ಮಧ್ಯಸ್ಥಿಕೆಗಳು ಎಲ್ಲರ ಗೌರವಕ್ಕೆ ಪಾತ್ರವಾಗಿವೆ. ಜಿಲ್ಲೆಯ ಎಲ್ಲಾ ಗ್ರಾಮ ಕಚೇರಿಗಳಿಗೆ ಭೇಟಿ ನೀಡಿ ಗ್ರಾಮ ಕಚೇರಿಗಳಲ್ಲಿನ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಿ ಇವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದರು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದರು.





